ADVERTISEMENT

ಕೃಷ್ಣ ಟಾಕೀಸ್‌ನಲಿ ಥ್ರಿಲ್ಲರ್ ಕಥನ

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:30 IST
Last Updated 5 ಮೇ 2020, 19:30 IST
‘ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಪೂರ್ವಾ ಮತ್ತು ಕೃಷ್ಣ ಅಜೇಯ್‌ ರಾವ್‌
‘ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಪೂರ್ವಾ ಮತ್ತು ಕೃಷ್ಣ ಅಜೇಯ್‌ ರಾವ್‌   

ನಿರ್ದೇಶಕ ವಿಜಯಾನಂದ್‌ ಮತ್ತು ನಟ ಕೃಷ್ಣ ಅಜೇಯ್ ರಾವ್‌ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಕೃಷ್ಣ ಟಾಕೀಸ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನು ನಿರ್ದೇಶಿಸಿರುವುದು ವಿಜಯಾನಂದ್‌. ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ನೊಗ ಹೊತ್ತಿದ್ದಾರೆ. ಅವರ ಮೂಲ ಹೆಸರು ‘ಆನಂದ ಪ್ರಿಯ’. ಈ ಚಿತ್ರದ ಮೂಲಕ ವಿಜಯಾನಂದ್‌ ಆಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಅರವತ್ತಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಹಾಗೂ ನಲವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ಹಿರಿಮೆ ಅವರದು.

‘ಕೃಷ್ಣನ್‌ ಲವ್‌ಸ್ಟೋರಿ’, ‘ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ’, ‘ಕೃಷ್ಣ ಲೀಲಾ’, ‘ಕೃಷ್ಣ ರುಕ್ಕು’ ಹೀಗೆ ಕೃಷ್ಣನ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್‌ ರಾವ್‌ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಅವರದು ಲವರ್‌ಬಾಯ್‌ ಇಮೇಜ್‌ನಿಂದ ಹೊರಬರುವ ತವಕ.

ADVERTISEMENT

ಎರಡು ವರ್ಷದ ಹಿಂದೆ ಅಜೇಯ್‌ ರಾವ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ‘ತಾಯಿಗೆ ತಕ್ಕ ಮಗ’ ಚಿತ್ರ ತೆರೆಕಂಡಿತ್ತು. ಶಶಾಂಕ್‌ ಆ್ಯಕ್ಷನ್‌ ಕಟ್‌ ಹೇಳಿದ್ದ ಇದರಲ್ಲಿ ನಟಿ ಸುಮಲತಾ ಅಂಬರೀಷ್‌ ಅವರು ತಾಯಿಯ ಪಾತ್ರ ನಿಭಾಯಿಸಿದ್ದರು. ಆದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಕಳೆದ ವರ್ಷ ಕೂಡ ಅಜೇಯ್‌ ರಾವ್ ನಟನೆಯ ಯಾವುದೇ ಸಿನಿಮಾವೂ ಬಿಡುಗಡೆಯಾಗಿಲ್ಲ. ಹಾಗಾಗಿ, ‘ಕೃಷ್ಣ ಟಾಕೀಸ್’ ಮೇಲೆ ನಿರೀಕ್ಷೆ ಹೆಚ್ಚಿದೆ.

ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿದೆ. ಲಾಕ್‌ಡೌನ್‌ ಮುಗಿದ ಬಳಿಕ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

‘ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದು. ಈ ಹಿಂದೆ ಕಾಣಿಸಿಕೊಂಡಿರದ ಪಾತ್ರದಲ್ಲಿ ಅಜೇಯ್‌ ರಾವ್‌ ಬಣ್ಣ ಹಚ್ಚಿದ್ದಾರೆ’ ಎಂಬುದು ನಿರ್ದೇಶಕ ವಿಜಯಾನಂದ್‌ ಅವರ ವಿವರಣೆ.

ಶ್ರೀಧರ್‌ ಸಂಭ್ರಮ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಅಭಿಷೇಕ್ ಜಿ. ಕಾಸರಗೋಡು ಅವರದು. ಶ್ರೀಕಾಂತ್ ಸಂಕಲನ ನಿರ್ವಹಿಸಿದ್ದಾರೆ. ವಿಕ್ರಂ ಅವರ ಸಾಹಸ ನಿರ್ದೇಶನವಿದೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ.

ಅಪೂರ್ವಾ ಈ ಚಿತ್ರದ ನಾಯಕಿ. ಎರಡು ವಿಭಿನ್ನ ಶೇಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮಿಗೌಡ, ಯಮುನಾ, ಧರ್ಮೇಂದ್ರ ಅರಸ್ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.