ADVERTISEMENT

‘ತಾಯವ್ವ’ನಿಗೆ ಜೊತೆಯಾದ ಸುದೀಪ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 20:02 IST
Last Updated 24 ಜನವರಿ 2025, 20:02 IST
ಚಿತ್ರತಂಡದೊಂದಿಗೆ ಸುದೀಪ್‌
ಚಿತ್ರತಂಡದೊಂದಿಗೆ ಸುದೀಪ್‌   

‘ತಾಯವ್ವ’ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿತ್ತು. ನಟ ಸುದೀಪ್‌ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಹಿರಿಯ ನಟಿ ಉಮಾಶ್ರೀ ‘ತಾಯವ್ವ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸುದೀಪ್‌, ‘ನಾನು ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ‘ತಾಯವ್ವ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾ ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿತ್ತು. ನನ್ನ ವೃತ್ತಿ ಜೀವನದಲ್ಲಿ ಈ ಚಿತ್ರ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ‘ತಾಯವ್ವ’ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನಿಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ‘ತಾಯವ್ವ’ನಾಗಿ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.  ‘ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಕಥೆಯನ್ನು ಈ ಚಿತ್ರಹೊಂದಿದೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ಶೀಘ್ರದಲ್ಲಿ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು. 

ADVERTISEMENT

ಪದ್ಮಾವತಿ ಚಂದ್ರಶೇಖರ್‌ ಬಂಡವಾಳ ಹೂಡಿದ್ದಾರೆ. ಅನಂತ ಆರ್ಯನ್‌ ಸಂಗೀತ ಸಂಯೋಜನೆಯಿದೆ. ಹಿರಿಯ ನಿರ್ಮಾಪಕ ಭಾ. ಮ. ಹರೀಶ್‌ ಅವರು ತಮ್ಮದೇ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಪ್ರಾರಂಭಿಸಿದ್ದು, ಅದರಲ್ಲಿ ಈ ಚಿತ್ರದ ಹಾಡುಗಳು ಲಭ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.