ಚಂದನವನದಲ್ಲೀಗ ಹೊಸಬರ ಭಿನ್ನ ಪ್ರಯತ್ನದ ಸಿನಿಮಾಗಳು ಸದ್ದು ಮಾಡುತ್ತಿವೆ. ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಇದಕ್ಕೆ ಹೊಸ ಸೇರ್ಪಡೆ. ಈ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಯಿತು.
ಸುರಾಗ್ ಸಾಗರ್ ನಿರ್ದೇಶನದ ಈ ಚಿತ್ರದ ‘ನೀ ನನ್ನ ಹೊಸತನ’ ಎಂಬ ಹಾಡನ್ನು ನಟ ಗಣೇಶ್ ಅವರು ರಿಲೀಸ್ ಮಾಡಿದರು. ಸುರಾಮ್ ಮೂವೀಸ್‌ನಡಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಈ ಸಿನಿಮಾದಲ್ಲಿ, ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ನಟಿಸಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ, ಶ್ರುತಿ ಹರಿಹರನ್, ಕೆ.ಎಸ್.ಶ್ರೀಧರ್, ಸುಧಾರಾಣಿ ತಾರಾಬಳಗದಲ್ಲಿದ್ದಾರೆ.
‘ಇದು ನನ್ನ ನಿರ್ಮಾಣದ ಮೂರನೇ ಸಿನಿಮಾ. ಚಿತ್ರಕ್ಕೆ ಹಾಡುಗಳು ಆಮಂತ್ರಣದಂತೆ. ಹಾಡುಗಳಿಗೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವ ಶಕ್ತಿಯಿದೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ನೀ ನನ್ನ...’ ಹಾಡನ್ನು ರಾಘವೇಂದ್ರ ಕಾಮತ್ ಅವರು ಬರೆದಿದ್ದಾರೆ. ಗಾಯಕ ಸೋನು ನಿಗಮ್ ಅವರು ಹಾಡಿದ್ದಾರೆ. ಆರು ತಿಂಗಳ ಹಿಂದೆಯೇ ಈ ಹಾಡು ಸಿದ್ಧವಾಗಿತ್ತು. ಆನಂತರ ಸೋನು ನಿಗಮ್ ಅವರ ವಿವಾದ ನಡೆದಿತ್ತು. ನಮಗೂ ಎಲ್ಲದಕ್ಕಿಂತ ಭಾಷೆ ಮುಖ್ಯ. ಆ ನಿಟ್ಟಿನಲ್ಲಿ ಸೋನು ನಿಗಮ್ ಅವರ ದನಿಯಲ್ಲಿ ಬಂದಿರುವ ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳುವುದಿಲ್ಲ. ಬೇರೆ ಗಾಯಕರಿಂದ ಈ ಹಾಡನ್ನು ಹಾಡಿಸುತ್ತೇವೆ’ ಎಂದಿದ್ದಾರೆ ನಿರ್ಮಾಪಕ ಜಯರಾಮ ದೇವಸಮುದ್ರ.
‘ನನ್ನ ಮಾತೃಭಾಷೆಯಲ್ಲೇ ಮೊದಲ ಸಿನಿಮಾ ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ನಿರ್ಮಾಣವಾಗಿದೆ. ಪ್ರವೀರ್ ಹಾಗೂ ರಿಷಿಕಾ ಜೋಡಿಯ ಬಗ್ಗೆ ಈಗಾಗಲೇ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ನಕುಲ್ ಅಭಯಂಕರ್ ಸಂಗೀತ ಹಾಗೂ ಅಜಯ್ ಕುಲಕರ್ಣಿ ಛಾಯಾಚಿತ್ರಗ್ರಹಣ ನಮ್ಮ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು ಸುರಾಗ್.
‘ಭಾಷೆ ಉಳಿದರಷ್ಟೇ ನಾವು ಉಳಿಯುತ್ತೇವೆ. ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾವಿರಾರು ಜನರು ಬಂದು ಹೋಗುತ್ತಾರೆ ಉಳಿಯುವುದು ಭಾಷೆ ಒಂದೇ. ಇರುವ ಭಾಷೆಯನ್ನು ಉಳಿಸಿಕೊಂಡರೆ ಅದೇ ಧನ್ಯ. ಗಾಯಕರನ್ನು ಬದಲಾಯಿಸುವ ನನ್ನ ಆಗ್ರಹವನ್ನು ಪರಿಗಣಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ’ ಎಂದರು ನಟ ಗಣೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.