ADVERTISEMENT

ಅಡಿಗರ ನೈಟ್‌ ಔಟ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 13:20 IST
Last Updated 10 ಏಪ್ರಿಲ್ 2019, 13:20 IST
ರಾಕೇಶ್ ಅಡಿಗ
ರಾಕೇಶ್ ಅಡಿಗ   

ರಾಕೇಶ್ ಅಡಿಗ ನಿರ್ದೇಶನದ ‘ನೈಟ್ ಔಟ್’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದ್ದು, ಇದು ವೀಕ್ಷಕರನ್ನು ನೈಟ್ ಔಟ್ ಮಾಡಿಸಲಿದೆಯೇ ಎಂಬ ಕುತೂಹಲದ ಪ್ರಶ್ನೆ ಸಿನಿಮಾ ಪ್ರಿಯರನ್ನು ಆವರಿಸಿಕೊಂಡಿದೆ.

ಅಡಿಗ ಮತ್ತು ಅಕ್ಷಯ್ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ಇಂದಿಗೆ ಸುಮಾರು ಹತ್ತು ವರ್ಷಗಳ ಹಿಂದೆ. ಆದರೆ ಹತ್ತು ವರ್ಷಗಳ ನಂತರ ಅಕ್ಷಯ್ ಅವರು ಚಿತ್ರ ಹೀರೊ ಆಗಿದ್ದಾರೆ, ಅಡಿಗ ಅವರು ನಿರ್ದೇಶಕರಾಗಿ ನಿಂತಿದ್ದಾರೆ. ಅಂದಹಾಗೆ, ‘ನೈಟ್ ಔಟ್’ ಚಿತ್ರವನ್ನು ಆರ್ಯನ್ ಮೋಷನ್ ಪಿಚ್ಚರ್ಸ್‌ ಸಿನಿಮಾ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗಿದೆ.

‘ಇದು ರಿಯಲಿಸ್ಟಿಕ್ ಆಗಿರುವ ಸಿನಿಮಾ. ಸಿನಿಮಾದ ಯಾವುದೇ ಪಾತ್ರಕ್ಕೂ ಯಾವುದೇ ರೀತಿಯ ಇಂಟ್ರಡಕ್ಷನ್ ಮಾಡಿಸಿಲ್ಲ. ಚಿತ್ರದಲ್ಲಿರುವ ಮೂರು ಪ್ರಮುಖ ಪಾತ್ರಗಳು ತಮ್ಮ ಪರಿಚಯವನ್ನು ತಾವೇ ಮಾಡಿಕೊಳ್ಳುತ್ತವೆ. ಒಂದೂಮುಕ್ಕಾಲು ಗಂಟೆ ಅವಧಿಯ ಸಿನಿಮಾ ಇದು. ಸಾಕಷ್ಟು ತಿರುವುಗಳನ್ನು ಹೊಂದಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಸಿದ್ಧಪಡಿಸಿದ್ದೇವೆ’ ಎಂದು ಹೇಳಿದರು ಅಡಿಗ.

ADVERTISEMENT

ಈ ಚಿತ್ರದ ಕಥೆ ಆರಂಭವಾಗುವುದು ಒಂದು ಆಟೊ ರಿಕ್ಷಾದಲ್ಲಿ. ‘ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರಕ್ಕೆ ಮಾಡಿದ ಕೆಲಸ ಮಾಮೂಲಿನಂತರ ಇರಲಿಲ್ಲ. ಇದು ಸವಾಲಿನ ಕೆಲಸ ಆಗಿತ್ತು’ ಎಂದರು ಸಂಗೀತ ನಿರ್ದೇಶಕ ಸಮೀರ್ ಕುಲಕರ್ಣಿ. ಸಿನಿಮಾ ಚಿತ್ರಕಥೆ ಬಿಗಿಯಾಗಿ ಇರುವ ಕಾರಣ, ಚಿತ್ರವನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ಕುಲಕರ್ಣಿ ಅವರದ್ದು.

ಚಿತ್ರದಲ್ಲಿ ಗೋಪಿ ಎನ್ನುವ ಪಾತ್ರವೊಂದಿದೆ. ಅದನ್ನು ನಿಭಾಯಿಸಿರುವವರು ಭರತ್. ‘ಗೋಪಿ ಬಹಳ ಸ್ವಾರ್ಥಿ. ಯಾರ ಬಗ್ಗೆಯೂ, ಯಾವ ಸಂಬಂಧಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುವವ ಅಲ್ಲ. ತನ್ನ ಆಸೆಗಳು ಈಡೇರಿದರೆ ಸಾಕು ಈತನಿಗೆ’ ಎಂದರು ಭರತ್.

ಅವರು ಈ ಪಾತ್ರ ನಿಭಾಯಿಸಲು ಸಾಧ್ಯವಾಗಿದ್ದು ಅಡಿಗ ಅವರ ಕಾರಣದಿಂದ. ‘ಅಡಿಗ ಅವರು ನಮಗೆ ಒಂದು ಕಾರ್ಯಾಗಾರ ಏರ್ಪಡಿಸಿ, ತರಬೇತಿ ನೀಡಿದರು. ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ನಂಬಿರುವೆ’ ಎಂದರು ಭರತ್.

ಶ್ರುತಿ ಗೊರಾಡಿಯಾ ಅವರು ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಚಿತ್ರದಲ್ಲಿ ನಾವು ಯಾರನ್ನೂ ವೈಭವೀಕರಿಸಿ ತೋರಿಸಿಲ್ಲ’ ಎಂದು ಸಿನಿತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.