
ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರದ ಪೋಸ್ಟರ್
‘ರಂಗಿತರಂಗ’ ಬಳಿಕ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವ ಹೊಸ ಪ್ರಾಜೆಕ್ಟ್ ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಇದೀಗ ಚಿತ್ರತಂಡ ಸಿನಿಮಾದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ.
ತಂದೆ–ಮಗನಾಗಿ ನಿರೂಪ್–ಸಾಯಿಕುಮಾರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎಂಬ ಶೀರ್ಷಿಕೆ ಇಡಲಾಗಿದೆ. ಶೀರ್ಷಿಕೆಯ ಜೊತೆಗೆ ಚಿತ್ರದ ಫಸ್ಟ್‌ಲುಕ್ ಕೂಡಾ ಬಿಡುಗಡೆಯಾಗಿದೆ. ‘ನನ್ನ ತಂದೆಯೇ ನನ್ನ ವಿಲನ್’ ಎಂಬ ಅಡಿಬರಹದೊಂದಿಗೆ ಈ ಸಿನಿಮಾ ಸೆಟ್ಟೇರಿದೆ. ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಸಚಿನ್ ವಾಲಿ ಸಾರಥ್ಯದ ಈ ಸಿನಿಮಾದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ‘ಶಿವಾನಿ’ಯಾಗಿ ಮಿಂಚಿದ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಲಿದ್ದಾರೆ.
‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾ ಹಾಸ್ಯ ಹಾಗೂ ಸಾಂಸಾರಿಕ ಕಥಾವಸ್ತುವನ್ನು ಹೊಂದಿದ್ದು ಇದರ ಚಿತ್ರಣ ತೀರ್ಥಹಳ್ಳಿ ಮತ್ತು ಚೆನ್ನಗಿರಿಯ ಆಸುಪಾಸಿನಲ್ಲಿ ನಡೆಯುತ್ತಿದೆ. ಅಂಕಿತಾ ಅಮರ್, ಸ್ವಾತಿ ಗುರುದತ್, ಎಂ. ಕೆ. ಮಠ, ಚೇತನ್ ದುರ್ಗಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಂಕಿತ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಅಂಕಿತ್ ಸೋನಿಗಾರ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಚಿತ್ರಗ್ರಹಣ, ಸಚಿನ್ ಬಸ್ರೂರು ಸಂಗೀತ, ಉಜ್ವಲ್ ಚಂದ್ರ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.