ADVERTISEMENT

ಪಾರವ್ವನ ಕನಸು; ಸುರೇಶ್‌ಗೆ ಸಿನಿಮಾ ನನಸು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 7:53 IST
Last Updated 16 ಜುಲೈ 2020, 7:53 IST
ಸುರೇಶ್‌ ಕುಮಾರ್‌ ಮತ್ತು ರಶ್ಮಿತಾ
ಸುರೇಶ್‌ ಕುಮಾರ್‌ ಮತ್ತು ರಶ್ಮಿತಾ   

ಬಂಗಾರದ ಬದುಕು ಕಟ್ಟಿಕೊಳ್ಳಬೇಕೆಂದು ಹಳ್ಳಿಯನ್ನು ತೊರೆದು ನಗರಕ್ಕೆ ಬಂದ ಪಾರವ್ವ ತನ್ನ ಕನಸು ನನಸಾಗಿಸಿಕೊಳ್ಳುವಳೇ ಎನ್ನುವ ಕುತೂಹಲದ ಕಥಾಹಂದರವಿರುವ ಚಿತ್ರ ‘ಪಾರವ್ವನ ಕನಸು’ ಬಿಡುಗಡೆಗೆ ಸಜ್ಜಾಗಿದೆ.

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಿರುವುದು ‘ಶಾಲಿನಿ’ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಸಿ.ಮಲ್ಲಿಕಾರ್ಜುನ್‌.ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚನೆಯ ಹೊಣೆಯನ್ನೂ ನಿಭಾಯಿಸಿದ್ದಾರೆ.

ಧೀಮಂತ್‌ ಪ್ರೊಡಕ್ಷನ್‌ ಬ್ಯಾನರ್‌ನಡಿ ಬಂಡವಾಳ ಹೂಡಿರುವ ಬಿಲ್ಡರ್‌ಆರ್‌. ಸುರೇಶ್‌ ಕುಮಾರ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ನೀಡುತ್ತಿದ್ದಾರೆ. ಸಿನಿಮಾ ಮೇಲಿನ ಮೋಹ ಮತ್ತು ಆಸಕ್ತಿಯಿಂದಾಗಿ ಮೂರು ತಿಂಗಳುಗಳಲ್ಲಿ ಡಾನ್ಸ್‌ ಮತ್ತು ಅಭಿನಯ ತರಬೇತಿ ಪಡೆದು ನಟಿಸಿದ್ದೇನೆ ಎಂದು ನಾಯಕ ನಟ ಮತ್ತು ನಿರ್ಮಾಪಕ ಸುರೇಶ್‌ ಕುಮಾರ್‌ ‘ಸಿನಿಮಾ ಪುರವಣಿ’ ಜತೆಗೆ ಮಾತಿಗಾರಂಭಿಸಿದರು.

ADVERTISEMENT

ರೌಡಿಸಂ, ಬಡಿದಾಟ ಈ ಸಿನಿಮಾದಲ್ಲಿ ವಿಜೃಂಭಿಸುವುದಿಲ್ಲ.ಹಳ್ಳಿಗಾಡಿನ ಸಂಸ್ಕೃತಿ ಮತ್ತು ನಗರ ಜೀವನ ಸಮ್ಮಿಶ್ರಣದ ಕಥೆ ಇದರಲ್ಲಿದೆ. ಹಳ್ಳಿಯಿಂದ ನಗರಕ್ಕೆ ಬದುಕು ಕಟ್ಟಿಕೊಳ್ಳಲು ಬಂದವರು ಏನೆಲ್ಲ ಸವಾಲು ಮತ್ತು ಸಂಕಷ್ಟಗಳನ್ನು ಎದುರಿಸಬೇಕೆನ್ನುವುದನ್ನು ಇದರಲ್ಲಿ ತೋರಿಸಲಾಗಿದೆ. ಪಾರವ್ವ ಹಳ್ಳಿಯಲ್ಲಿ ಕೂಲಿ ಮಾಡುವ ಹೆಂಗಸು. ಅವಳದು ಒಂದೇ ಕನಸೆಂದರೆ, ತಾನಿದ್ದ ಹಳೆ ಮನೆಯನ್ನು ಕೆಡವಿ, ಅಲ್ಲಿ ಒಳ್ಳೆಯ ಮನೆಯನ್ನು ಕಟ್ಟಿ ತನ್ನೆರಡು ಮಕ್ಕಳಿಗೆ ಮದುವೆ ಮಾಡಿಸಬೇಕೆನ್ನುವುದಾಗಿರುತ್ತದೆ. ಆದರೆ, ಗಂಡ ಬೇಜವಾಬ್ದಾರಿ ವ್ಯಕ್ತಿ ಮತ್ತು ಕುಡುಕ. ಆತನನ್ನು ಸರಿದಾರಿಗೆ ತಂದು, ತಾನು ಮುತ್ತೈದೆಯಾಗಿ ಬಾಳಬೇಕೆಂದು ಕನಸು ಕಾಣುತ್ತಾ ಬೆಂಗಳೂರಿಗೆ ಗುಳೆ ಬರುತ್ತಾಳೆ. ಬಂದ ಹಾದಿಯಲ್ಲಿ ಅವಳು ಸಫಲವಾಗುತ್ತಾಳಾ? ಅಥವಾ ಅವಳ ಕನಸು ಕನಸಾಗಿಯೇ ಉಳಿಯುತ್ತದಾ? ಅಥವಾ ನನಸಾಗುವುದೇ ಎನ್ನುವುದು ಈ ಚಿತ್ರದ ಕುತೂಹಲ ಎಂದು ಸುರೇಶ್‌ ಕಥೆಯ ಸಾರಾಂಶ ಬಿಚ್ಚಿಟ್ಟರು.

‘ಈ ಚಿತ್ರವನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದ್ದೆವು.‌ಬೆಂಗಳೂರು, ಮಂಗಳೂರು,ಚಿಕ್ಕಮಗಳೂರು ಭಾಗದಲ್ಲಿ 42 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆವು.ವರ್ಷದ ಹಿಂದೆಯೇ ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದವು. ಸೆನ್ಸಾರ್‌ ಮಂಡಳಿಯು ಈ ಚಿತ್ರಕ್ಕೆ ಯು/ಎ ಅರ್ಹತಾ ಪ್ರಮಾಣ ಪತ್ರ ನೀಡಿದೆ. ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದೆವು. ಲಾಕ್‌ಡೌನ್‌ನಿಂದಾಗಿ ಬಿಡುಗಡೆ ಮುಂದೂಡಿದ್ದೆವು. ಚಿತ್ರಮಂದಿರಗಳು ಸದ್ಯಕ್ಕೆ ಬಾಗಿಲು ತೆರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ, ಹಾಗಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಅಮೆಜಾನ್‌ ಪ್ರೈಮ್‌ ಸೇರಿ ಮೂರುನಾಲ್ಕು ಓಟಿಟಿ ವೇದಿಕೆಗಳ ಜತೆಗೆ ಮಾತುಕತೆ ನಡೆಯುತ್ತಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುವ ಮಾತು ಸೇರಿಸಿದರು.

ಈ ಚಿತ್ರದಲ್ಲಿ ರಶ್ಮಿತಾ ಮತ್ತು ಹರ್ಷಿತಾ ನಾಯಕಿಯರಾಗಿ ನಟಿಸಿದ್ದಾರೆ.ಅಪೂರ್ವಶ್ರೀ, ಆಂಜನಪ್ಪ, ಶಿವಕುಮಾರ್ ಆರಾಧ್ಯ, ಕಿಲ್ಲರ್‌ ವೆಂಕಟೇಶ್, ಮಜಾಭಾರತ ಖ್ಯಾತಿಯ ಚಂದ್ರಪ್ರಭಾ ಅವರ ತಾರಾಗಣವಿದೆ. ನಾಲ್ಕು ಹಾಡುಗಳಿಗೆ ತರುಣ್‌ ಸೈಮಂಡ್ಸ್‌‌ ಸಂಗೀತ ನಿರ್ದೇಶನ ಮಾಡಿದ್ದಾರೆ.ಛಾಯಾಗ್ರಹಣ ನಾಗಶೆಟ್ಟಿ ಮಳಗಿ, ನೃತ್ಯ ಸಂಯೋಜನೆ ವಿಜಯನಗರ ಮಂಜು ಮತ್ತು ಹರಿಕೃಷ್ಣ, ಸಂಕಲನ ಪವನ್‌ ಮತ್ತು ರಾಮ್‍ಸೆಟ್ಟಿ ಅವರದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.