ADVERTISEMENT

‘ಪಾದರಾಯ’ಕ್ಕೆ ಮಂಗ್ಲಿ ನಾಯಕಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 13:19 IST
Last Updated 11 ಜನವರಿ 2023, 13:19 IST
   

ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಹೊಸ ಚಿತ್ರ ‘ಪಾದರಾಯ’ಕ್ಕೆ ನಾಯಕಿಯಾಗಿ ಗಾಯಕಿ ಮಂಗ್ಲಿ ಆಯ್ಕೆಯಾಗಿದ್ದಾರೆ. ನಿರೂಪಕಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡಿರುವ ಮಂಗ್ಲಿ ಇದೀಗ ಸಿನಿಮಾ ಜಗತ್ತಿನಲ್ಲಿ ತಮ್ಮ ಹೊಸ ಪಯಣ ಆರಂಭಿಸಿದ್ದಾರೆ.

ಚಿತ್ರದಲ್ಲಿ ‘ಮೈನಾ’, ‘ಸಂಜು ವೆಡ್ಸ್ ಗೀತಾ’ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸಲಿದ್ದಾರೆ. ನೈಜ ಘಟನೆ ಆಧರಿಸಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗಲಿದೆ.

ಅಂಜನಾದ್ರಿ ಸುತ್ತಮುತ್ತ ನಡೆಯುವ ಕಥೆ ಚಿತ್ರಲ್ಲಿದೆ. 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ. ಈ ಘಟನೆ ಆರು ರಾಜ್ಯಕ್ಕೆ ಸಂಬಂಧಿಸಿದ್ದು, ಯೂನಿವರ್ಸಲ್ ಸಬ್ಜೆಕ್ಟ್ ಆಗಿರುವ ಕಾರಣ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.

ADVERTISEMENT

ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹೊರಡುವ ಮುನ್ನ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತವನ್ನು ಆಚರಿಸುತ್ತಿದ್ದಾರೆ ಎಂದಿದೆ ಚಿತ್ರತಂಡ. ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್‌ನಡಿ ಆರ್.ಚಂದ್ರು ‘ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್ ಸಹ ನಿರ್ಮಾಣವಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.