ADVERTISEMENT

ಈ ವಯಸ್ಸಲ್ಲೇನ್ಮಾಡೊದೋ ಗೊತ್ತಾಗೊದಿಲ್ಲ

ಮೋಡಿ ಮಾಡುತ್ತಿದೆ ‘ಪಂಚತಂತ್ರ‘ ಸಿನಿಮಾದ ಎರಡನೇ ಹಾಡು

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 9:08 IST
Last Updated 7 ಜನವರಿ 2019, 9:08 IST
‘ಪಂಚತಂತ್ರ’ ಸಿನಿಮಾದ ಹಾಡಿನ ದೃಶ್ಯ
‘ಪಂಚತಂತ್ರ’ ಸಿನಿಮಾದ ಹಾಡಿನ ದೃಶ್ಯ   

‘ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ’ ಹಾಡಿನ ಮೂಲಕ ಚಳಿಗಾಲಕ್ಕೆ ಹರೆಯದ ಮನಸ್ಸುಗಳಿಗೆ ಬೆಚ್ಚನೆ ಗಿಫ್ಟ್‌ ಕೊಟ್ಟಿದ್ದ ಯೋಗರಾಜ ಭಟ್ಟರು ಇದೀಗ ತಮ್ಮ ಬತ್ತಳಿಕೆಯಿಂದಇನ್ನೊಂದು ಮಾಸ್‌ ಜಕಾಸ್‌ ಹಾಡಿನ ಬಾಣ ತೆಗೆದು ಹೊಸ ಹುಡುಗ/ಗಿಯರ ಮನಸ್ಸೊಳಗೆ ತೂರಿ ಬಿಟ್ಟಿದ್ದಾರೆ.

‘ಈ ವಯಸ್ಸಲ್ಲೇನ್ಮಾಡೊದೋ ಗೊತ್ತಾಗೊದಿಲ್ಲ/ ಇಪ್ಪತ್ತನಾಲ್ಕು ಗಂಟೆ ಸಾಕಾಗ್ತಾ ಇಲ್ಲ’

ಹೀಗೆ ಶುರುವಾಗುವ ಹಾಡು ಇಂದಿನ ಕಾಲದ ಹರೆಯದವರ ಕಂಪ್ಲೆಂಟುಗಳ ಪಟ್ಟಿಯನ್ನೂ, ಹಿರಿಯರ ಕುರಿತ ಸಿಟ್ಟನ್ನೂ ಒಟ್ಟೊಟ್ಟಿಗೆ ಬಿಂಬಿಸುವ ಹಾಗಿದೆ. ಈ ಹಾಡು ಸೋಮವಾರ (ಜ.7)ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಿದೆ. ಇದು ‘ಪಂಚತಂತ್ರ’ ಸಿನಿಮಾದ ಎರಡನೇ ಹಾಡು.

ADVERTISEMENT

ನಾವೆಲ್ಲರೂ ಚಿಕ್ಕಂದಿನಲ್ಲಿ ಕೇಳಿದ್ದ ಆಮೆ ಮೊಲದ ರೇಸ್‌ ಕಥೆಯನ್ನೇ ಹೊಸ ಕಾಲಘಟ್ಟಕ್ಕೆ ಎರಡು ಪೀಳಿಗೆಯವರ ನಡುವಿನ ಜಟಾಪಟಿಯ ಕಥೆಯನ್ನಾಗಿ ‘ಪಂಚತಂತ್ರ’ ಎಂಬ ಹೆಸರಿನಲ್ಲಿ ತೆರೆಯ ಮೇಲೆ ತರುತ್ತಿದ್ದಾರೆ. ಶೃಂಗಾರದ ಹಾಡಿನಲ್ಲಿ ವಿಹಾನ್‌ ಮತ್ತು ಸೋನಲ್ ಮೊಂತೆರೊ ಜೋಡಿ ನೃತ್ಯದ ರಸದೌತಣ ಬಡಿಸಿತ್ತು. ಈಗ ಪಡ್ಡೆ ಹುಡುಗರಿಗಾರಿಯೇ ಬರೆದಿರುವ ಹಾಡಿನ ಮೂಲಕ ಭಟ್ಟರು ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ.

‘ಇದು ಯುವಕರ ಗೀತೆ. ವಯಸ್ಸಾದವರ ಮೇಲೆ ಇಂದಿನ ಯುವಕರಿಗೆ ಇರುವ ದೂರುಗಳ ಪಟ್ಟಿಯೇ ಈ ಹಾಡಿನಲ್ಲಿದೆ. ಹರಿಕೃಷ್ಣ ಅವರ ಕಂಠದಿಂದ ಬಂದಿರುವ ಇನ್ನೊಂದು ಭಯಂಕರ ಅಸ್ತ್ರ ಇದು. ಜನಪ್ರಿಯ ಪಾರ್ಟಿ ಸಾಂಗ್ ಆಗುತ್ತದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಯೋಗರಾಜ ಭಟ್.

ವಿಹಾನ್, ಅಕ್ಷರಾ ಗೌಡ ಮತ್ತು ಸೋನಲ್ ಮೊಂತೆರೊ ಈ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಗ್ಯಾರೇಜಿನ ಸೆಟಪ್‌ನಲ್ಲಿ ಪಾರ್ಟಿ ಮೂಡ್‌ನಲ್ಲಿ ಈ ಹಾಡು ಮೂಡಿಬಂದಿದೆ.ಈಗಾಗಲೇ ‘ಪಂಚತಂತ್ರ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದೆ. ಫೆಬ್ರುವರಿಯಲ್ಲಿ ಚಿತ್ರವನ್ನು ತೆರೆಯ ಮೇಲೆ ತರುವ ಯೋಚನೆಯಲ್ಲಿ ತಂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.