ADVERTISEMENT

ಕ್ರಿಸ್‌ಮಸ್‌ ಹಬ್ಬಕ್ಕೆ ಶೃಂಗಾರದ ಗಿಫ್ಟ್‌!

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 11:24 IST
Last Updated 24 ಡಿಸೆಂಬರ್ 2018, 11:24 IST
   

ಯೋಗರಾಜ್‌ ಭಟ್‌ ಅವರ ‘ಪಂಚತಂತ್ರ’ ಸಿನಿಮಾದ ಮೊದಲ ವಿಡಿಯೊ ಸಾಂಗ್‌ ಡಿ. 25ರಂದು ಬಿಡುಗಡೆಯಾಗಲಿದೆ. ಈ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ಶೃಂಗಾರದ ಹಾಡಿನ ಗಿಫ್ಟ್‌ ಕೊಡಲು ತಂಡ ಸಜ್ಜಾಗಿದೆ. ಯೋಗರಾಜ್‌ ಭಟ್‌ ಅವರೇ ಬರೆದಿರುವ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶೃಂಗಾರದ ಪಲುಕು ಪುಳಕಗಳನ್ನು ಹದವಾಗಿ ಬೆರೆಸಿರುವ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುವ ಹಾಗೆ ಹಾಡಿದ್ದಾರೆ ವಿಜಯ ಪ್ರಕಾಶ್‌. ಭಟ್ಟರ ಪೋಲಿತನ ಮತ್ತು ಕಾವ್ಯಗುಣ ಎರಡರ ಜುಗಲ್ಬಂದಿಯಂತೆ ಕಾಣುವ ಸಾಲುಗಳಿಗೆ ಚಿತ್ರತಂಡದ ಕಲಾವಿದ ಉಮೇಶ್‌ ಕುಟ್ನಿ ಅವರು ಕಲಾಕೃತಿಯ ರೂಪ ಕೊಟ್ಟಿದ್ದಾರೆ. ಸಾಲುಗಳನ್ನು ಕೇಳುತ್ತ ಮನಸಲ್ಲಿ ಅರಳುವ ಬೆಚ್ಚಗಿನ ಕಲ್ಪನೆಯೇ ಕಣ್ಮುಂದೆ ಜೀವತಳೆದಂತೆ ಕುಂಚವನ್ನು ಹರಿಬಿಟ್ಟಿದ್ದಾರೆ ಅವರು. ‘ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ/ನಾಚಿಕೆಯೂ ನನ್ನ ಜತೆ ಟೂ ಬಿಟ್ಟಿದೆ’ ಎಂದು ಶುರುವಾಗುವ ಈ ಹಾಡಿನ ಸಾಹಿತ್ಯ ಮತ್ತು ಉಮೇಶ್‌ ಕುಟ್ನಿ ರಚಿಸಿದ ಕಲಾಕೃತಿ ಎರಡೂ ಇಲ್ಲಿವೆ.

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ...

ನಾಚಿಕೆ ನಮ್ಮಾ ಜೊತೆ ಠೂ ಬಿಟ್ಟಿದೆ...

ADVERTISEMENT

ಕಳ್ಳಾಟಕೆ ಮಳ್ಳಾಮನ ಛೀ ಅಂದಿದೆ

ಚೆಲ್ಲಾಟಕೆ ಚೆಲುವು ಹ್ಞೂಂ ಎಂದಿದೆ

ಇಬ್ಬರ ಕಾಮನೆ ನೂರು

ತುಟಿಗಾಯಕೆ ಕಾರಣ ಯಾರು?

ಇದು ಗೊತ್ತಿಲ್ಲದಾ ರೋಮಾಂಚನ

ಹೋಗಿ ಬಂತು ಪ್ರಾಣ..!

ಬೆನ್ನಿಗೆ ಬೆರಳು ಸೋಕಿ

ಕಣ್ಣೆರಡು ಕೇಳಿವೆ ಬಾಕಿ,

ಇದು ತುಂಟ ಮೌನಾಚರಣೆಯು..!

ಸ್ಪರ್ಶವು ಕೇಳಲು ಕೊಂಚ

ಉಷ್ಣಾಂಶದ ಬೆಚ್ಚನೆ ಲಂಚ

ಶುರು ಜಂಟಿ ಕಾರ‍್ಯಾಚರಣೆಯು..!

ಗೊತ್ತಿದ್ದು ದಾರಿ ತಪ್ಪಿದಾಗ ಬೆವರಿನ ಹನಿಯು

ಹುಚ್ಚೆದ್ದು ಹಾಡು ಹೇಳಬಹುದೆ ಒಳಗಿನ ದನಿಯು?

ಇದು ಆವೇಗದ, ಆಲಿಂಗನ

ಹೋಗಿ ಬಂತು ಪ್ರಾಣ..!

ನಲ್ಮೆಯಲ್ಲೆಲ್ಲವೂ ಚೆಂದ,

ಮನ್ಮಥನ ಹಾವಳಿಯಿಂದ

ಬಚಾವಾದರೇನೂ ಸುಖವಿದೆ

ಬಿಚ್ಚಿದ ಕೂದಲ ಘನತೆ

ಅರೆ ಮುಚ್ಚಿದ ಕಂಗಳ ಕವಿತೆ

ಪ್ರಣಯಕ್ಕೊಂದು ಬೇರೆ ಮುಖವಿದೆ !!

ಕಡುಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು?

ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು!

ರತಿ ರಂಗೇರಲು ಪ್ರತಿಕ್ಷಣ

ಹೋಗಿಬಂತು ಪ್ರಾಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.