ADVERTISEMENT

ಹೊಸ ವರ್ಷಕ್ಕೆ ಚಂದನ್‌ಶೆಟ್ಟಿ ಪಾರ್ಟಿ ಸಾಂಗ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 10:56 IST
Last Updated 8 ಡಿಸೆಂಬರ್ 2020, 10:56 IST
ನಿವೇದಿತಾ ಗೌಡ, ಚಂದನ್‌ ಶೆಟ್ಟಿ, ನಿಶ್ವಿಕಾ ನಾಯ್ಡು
ನಿವೇದಿತಾ ಗೌಡ, ಚಂದನ್‌ ಶೆಟ್ಟಿ, ನಿಶ್ವಿಕಾ ನಾಯ್ಡು   

ಗಾಯಕ, ಸಂಗೀತಗಾರ ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮಾಡದೇ ತುಂಬಾ ದಿನಗಳೇ ಆಗಿತ್ತು. ‘ಮೂರೇ ಮೂರು ಪೆಗ್ಗಿಗೆ..’, ‘ಟಕೀಲಾ..’ ಪಾರ್ಟಿ ಸಾಂಗ್‌ಗಳ ಬಳಿಕ ಬೇರೆ ಹಾಡುಗಳನ್ನು ಮಾಡಿದರೇ ಹೊರತು, ಅದಾದ ಬಳಿಕ ಪಾರ್ಟಿ ಹಾಡುಗಳು ಕಿವಿಗಪ್ಪಳಿಸಿರಲಿಲ್ಲ. ಇದೀಗ ಪಾರ್ಟಿ ಸಾಂಗ್‌ ಪ್ರಿಯರ ಆ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಹೊಸ ವರ್ಷದ ಆಚರಣೆಗೆ ಕಿಕ್ಕೇರಿಸಲು ರ‍್ಯಾಪರ್‌ ಚಂದನ್ ಶೆಟ್ಟಿ ಹೊಸದೊಂದು ಪಾರ್ಟಿ ಸಾಂಗ್ ಮೂಲಕ ಅಭಿಮಾನಿಗಳ ಎದುರು ಹಾಜರಾಗಲು ಸಜ್ಜಾಗುತ್ತಿದ್ದಾರೆ. ಈ ಹೊಸ ಪಾರ್ಟಿ ಹಾಡನ್ನು ಯುನೈಟ್ ಆಡಿಯೋಸ್‌ನಲ್ಲಿ ಡಿ.26ರಂದು ಬಿಡುಗಡೆ ಮಾಡಲಿದೆ ತಂಡ.

ಈ ಪಾರ್ಟಿ ಸಾಂಗ್‌ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಮೂಡಿಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲರ್ ಫುಲ್ ಸೆಟ್‌ನಲ್ಲಿ ಎರಡು ದಿನ ಹಾಡಿನ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ ದೊಡ್ಡ ದೊಡ್ಡ ಹೋಟೆಲ್ ಮತ್ತು ಪಬ್‌ಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಲಿದೆ.

ಹಾಗಾದರೆ ಹಾಡಿನ ಶೀರ್ಷಿಕೆ ಏನು?

ADVERTISEMENT

‘ಪಾರ್ಟಿ ಫ್ರೀಕ್’ ಹೆಸರಿನ ಈ ಹಾಡನ್ನು ಚೈತನ್ಯ ಲಕಂಸಾನಿ ನಿರ್ಮಾಣ ಮಾಡುತ್ತಿದ್ದಾರೆ. ಸಾಹಿತ್ಯ, ಸಂಗೀತ ಹಾಗೂ ಗಾಯನದ ಜತೆಗೆ ಈ ಹಾಡಿಗೆ ಚಂದನ್‌ ಶೆಟ್ಟಿ ಸ್ಟೆಪ್‌ ಹಾಕಲಿದ್ದಾರೆ. ಸ್ಯಾಂಡಲ್‌ವುಡ್‌ ನಟಿ ನಿಶ್ವಿಕಾ ನಾಯ್ಡು ಈ ಕಲರ್ ಫುಲ್ ಹಾಡಿನಲ್ಲಿ ಮಸ್ತ್ ಮಸ್ತ್ ಡಾನ್ಸ್ ಮಾಡಲಿದ್ದಾರೆ. ಅಷ್ಟೇ ಅಲ್ಲ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರನ್ನು ತೋರಿಸಲಿದ್ದಾರೆ ಚಂದನ್.

ಶ್ರೀಶ ಕುದುವಳ್ಳಿ ಛಾಯಾಗ್ರಹಣ,ಅಜಿತ್ ಶ್ರೀರವಿ ವಸ್ತ್ರವಿನ್ಯಾಸ ಮಾಡಲಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಈ ಹಾಡಿಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷದ ನ್ಯೂ ಇಯರ್ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಸಲಿದ್ದು, ನಮ್ಮ ಹಾಡನ್ನು ಮನೆಯಲ್ಲಿಯೇ ಕೇಳಿ ಆನಂದಿಸುತ್ತ ಹೊಸ ವರ್ಷ ಬರಮಾಡಿಕೊಳ್ಳಿ ಎಂಬುದು ತಂಡದ ಉದ್ದೇಶ.

ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿರುವ ಪೊಗರು ಚಿತ್ರದ ಖರಾಬು ಹಾಡು ಕನ್ನಡದ ಜತೆಗೆ ತೆಲುಗಿನಲ್ಲಿಯೂ ಧೂಳೆಬ್ಬಿಸುತ್ತಿದೆ. ಕನ್ನಡದಲ್ಲಿ 17 ಕೋಟಿ ಬಾರಿ ವೀಕ್ಷಣೆಯಾದರೆ, ತೆಲುಗಿನಲ್ಲಿ 4.5 ಕೋಟಿ ವೀಕ್ಷಣೆ ಪಡೆದಿರುವುದಕ್ಕೆ ಚಂದನ್ ಶೆಟ್ಟಿ ಸಿಖತ್‌ ಖುಷಿಯಾಗಿದ್ದಾರೆ. ‘ಪಾರ್ಟಿ ಫ್ರೀಕ್’ ಮೂಲಕ ಪಾರ್ಟಿ ಸಾಂಗ್ ಪ್ರಿಯರ ಹೃದಯ ಗೆಲ್ಲಲು ತಯಾರಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.