ಇನ್ ಚಿತ್ರದ ಫಸ್ಟ್‌ಲುಕ್‌ನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಅಚ್ಚರಿ ಮತ್ತು ಆತಂಕ ಹುಟ್ಟಿಸುವ ಭಂಗಿಯಲ್ಲಿ ನಾಯಕಿ ಪಾವನಾ ಗೌಡ ಕಾಣಿಸಿಕೊಂಡಿದ್ದಾರೆ.
ಲಾಕ್‌ಡೌನ್ ವೇಳೆ ಮನೆಯೊಳಗೆ ಒಬ್ಬಳೇ ಉಳಿಯಬೇಕಾದ ಯುವತಿಯ ಪಾಡಿನ ಸುತ್ತ ಕಥೆ ನಡೆಯುತ್ತದೆ. ಪೋಸ್ಟರ್‌ನಲ್ಲಿ ಅರೆನಿದ್ರಾವಸ್ಥೆಯ ಭಂಗಿಯಲ್ಲಿರುವ ನಟಿ, ಪಕ್ಕದಲ್ಲಿರುವ ಆ್ಯಷ್ ಟ್ರೇ, ಸಿಗರೇಟ್ ಪ್ಯಾಕ್, ಲೈಟರ್, ರಿಂಗಣಿಸುತ್ತಿರುವ ಮೊಬೈಲ್, ಹಾಸಿಗೆ ಒದ್ದೆಯಾಗಿರುವ ದೃಶ್ಯ ನೋಡಿದರೆ ಪೋಸ್ಟರ್‌ನಲ್ಲೇ ಹೊಸ ಕುತೂಹಲಕಾರಿ ಕಥೆ ಹೇಳಲು ಹೊರಟಂತಿದೆ.
ತಿಂಗಳುಗಟ್ಟಲೆ ಒಂದು ಮನೆಯೊಳಗೆ (ಇನ್– IN) ಬಂಧಿಯಾಗುವ ಯುವತಿ ಈ ಸಂದರ್ಭದಲ್ಲಿ ಜೀವನವನ್ನು ಹೇಗೆ ನಿರ್ವಹಿಸುತ್ತಾಳೆ. ಲಾಕ್‌ಡೌನ್ ಅವಳಿಗೆ ವರವೋ ಶಾಪವೋ ಅದನ್ನು ಹೇಗೆ ಎದುರಿಸಿ ಜೀವನ ಸಾಗಿಸುತ್ತಾಳೆ ಎನ್ನುವುದೇ ಇನ್ ಚಿತ್ರದ ಕಥಾವಸ್ತು ಎಂದಿದೆ ಚಿತ್ರತಂಡ.
ನಿರ್ದೇಶಕ ಬಡಿಗೇರ್ ದೇವೇಂದ್ರ ಚಿತ್ರದ ಬಗ್ಗೆ ಮಾಹಿತಿ ನೀಡಿ, ‘ಲಾಕ್ ಡೌನ್ ಸಂದರ್ಭದಲ್ಲಿ ಏನಾದರೂ ಪ್ರಯೋಗ ಮಾಡಬೇಕೆಂದು ಸ್ನೇಹಿತ ಶಂಕರ ಪಾಗೋಜಿ ಜೊತೆ ಈ ಚಿತ್ರದ ಕುರಿತು ಚರ್ಚಿಸಿದೆ. ನಟಿ ಪಾವನಾ ಗೌಡ ಅವರೂ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲಿದೆ. ಜನರು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
‘ಒಂದು ವಿಭಿನ್ನ ಹಾಗೂ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಮಹಾನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುವ ಯುವತಿಯರಿಗೆ ಈ ಚಿತ್ರ ಒಳ್ಳೆಯ ಸಂದೇಶ ಮತ್ತು ಸ್ಫೂರ್ತಿದಾಯಕವಾಗಲಿದೆ’ ಎಂದಿದ್ದಾರೆ ಚಿತ್ರದ ನಾಯಕಿ ಪಾವನಾ ಗೌಡ.
ಕರುಣಾಕರ ಟಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರಕತೆ ಮತ್ತು ಸಂಭಾಷಣೆಯನ್ನು ಶಂಕರ ಪಾಗೋಜಿ ಹಾಗೂ ಬಡಿಗೇರ್ ದೇವೇಂದ್ರ ಬರೆದಿದ್ದಾರೆ. ಭರತ್ ನಾಯ್ಕ್ ಅವರ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.