ಪವನ್ ಕಲ್ಯಾಣ್ ಸದ್ಯ ಆಂಧ್ರಪ್ರದೇಶದ ಡಿಸಿಎಂ ಆಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಂತ ಸಿನಿಮಾದೊಂದಿಗಿನ ಅವರ ನಂಟು ಮುಗಿದಿಲ್ಲ. ನಟನಾಗಿ ಅವರಿಗಿರುವ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಅವರ ನಟನೆಯ ‘ಓಜಿ’ ಚಿತ್ರ ಸೆಪ್ಟೆಂಬರ್ 25ರಂದು ತೆರೆ ಕಾಣಲಿದೆ.
ಗ್ಯಾಂಗ್‌ಸ್ಟರ್ ಕಥೆ ಹೊಂದಿರುವ ಈ ಸಿನಿಮಾಗೆ ಸುಜಿತ್ ನಿರ್ದೇಶನವಿದೆ. ಇವರು ಈ ಹಿಂದೆ ‘ಸಾಹೋ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಡಿವಿವಿ ನಿರ್ಮಾಣ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ. ‘ಆರ್‌ಆರ್‌ಆರ್’ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿದ ಸಂಸ್ಥೆಯಿದು. ಈ ನಿರ್ಮಾಣ ಸಂಸ್ಥೆ ತನ್ನ ಎಕ್ಸ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಪೋಸ್ಟರ್ ಬಿಡುಗಡೆ ಮಾಡಿದೆ. ‘ದಿನಾಂಕ ನಿಗದಿಯಾಗಿದೆ ಮತ್ತು ಕಿರಾತಕ ಪಡೆ ಕ್ರೇಜಿಯಾಗಿ ವರ್ತಿಸಲು ಅಣಿಯಾಗಿದೆ’ ಎಂಬ ಅಡಿಬರಹವಿದೆ.
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರು ಪವನ್ ಕಲ್ಯಾಣ್ ಎದುರು ಖಳನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಕನ್ನಡತಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಈ ಚಿತ್ರ ಘೋಷಣೆಯಾಗಿ 2023ರಲ್ಲಿ ಸೆಟ್ಟೇರಿತ್ತು. ತಮನ್ ಎಸ್. ಸಂಗೀತ ನಿರ್ದೇಶನ, ರವಿ ಕೆ.ಚಂದ್ರನ್ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ. ಓಜಸ್ ಗಂಭೀರ್ ಎಂಬ ಕರುಣೆ ಇಲ್ಲದ ಡಾನ್ ಕುರಿತಾದ ಕಥೆಯನ್ನು ಈ ಚಿತ್ರ ಹೊಂದಿದೆ.
ಮುಂಬೈನಲ್ಲಿ ಕಥೆ ನಡೆಯಲಿದೆ. ಅರ್ಜುನ್ ದಾಸ್, ಪ್ರಕಾಶ್ ರಾಜ್, ಸೌರವ್ ಲೊಕೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಪವನ್ ಕಲ್ಯಾಣ್ ಅಭಿನಯದ ಮತ್ತೊಂದು ಚಿತ್ರ ‘ಹರಿ ಹರ ವೀರಮಲ್ಲು’ ಈ ವರ್ಷ ಜೂನ್‌ನಲ್ಲಿ ತೆರೆಗೆ ಬರುತ್ತಿದೆ. ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಕೂಡ ಘೋಷಣೆಯಾಗಿದೆ. ರಾಜಕೀಯ ಬದುಕಿನ ಜತೆಗೆ ಪವನ್ ಕಲ್ಯಾಣ್ ಸಿನಿಮಾ ವೃತ್ತಿಯಲ್ಲಿಯೂ ಮಗ್ನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.