ADVERTISEMENT

‘ಸಿನಿಮಾ ಭಾಷೆ’ ಕಟ್ಟಿದ ‘ಪೆದ್ರೊ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 19:30 IST
Last Updated 3 ಮಾರ್ಚ್ 2022, 19:30 IST
ಪೆದ್ರೊ ಪೋಸ್ಟರ್‌ ಬಿಡುಗಡೆಗೊಳಿಸಿದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ. ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ನಟೇಶ್‌ ಹೆಗಡೆ ಮತ್ತಿತರರು ಇದ್ದಾರೆ. 
ಪೆದ್ರೊ ಪೋಸ್ಟರ್‌ ಬಿಡುಗಡೆಗೊಳಿಸಿದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ. ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ನಟೇಶ್‌ ಹೆಗಡೆ ಮತ್ತಿತರರು ಇದ್ದಾರೆ.    

ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ನಟೇಶ್‌ ಹೆಗಡೆ ನಿರ್ದೇಶನದ ಸಿನಿಮಾ ‘ಪೆದ್ರೊ’ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರದ ಪೋಸ್ಟರ್‌, ಟ್ರೇಲರ್‌ ಬಿಡುಗಡೆ ಮಾಡಿದ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು, ‘ಪೆದ್ರೊದ ಸಿನಿಮಾ ಭಾಷೆ ನೋಡಿ ನಿಜವಾಗಿಯೂ ಬೆರಗಾದೆ’ ಎಂದು ಶ್ಲಾಘಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ನಟೇಶ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ‘ಪೆದ್ರೊ’ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್‌ ಒಬ್ಬನ ಕಥೆಯಾಗಿದ್ದು, ಈ ಚಿತ್ರವನ್ನು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ನಟ ರಾಜ್‌ ಬಿ.ಶೆಟ್ಟಿ ಅವರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಮುಖ್ಯಭೂಮಿಕೆಯಲ್ಲಿ ನಟೇಶ್‌ ಅವರ ತಂದೆ ಗೋಪಾಲ ಹೆಗಡೆಯವರೇ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಗಿರೀಶ ಕಾಸರವಳ್ಳಿ ಅವರು, ‘ಇತ್ತೀಚೆಗಿನ ಕನ್ನಡ ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಕನ್ನಡ ಭಾಷೆಯನ್ನು ಸಶಕ್ತವಾಗಿ ಬಳಸುತ್ತಿದ್ದಾರೆ. ಹಿಂದೆ ಬೆಂಗಳೂರು, ಮಂಡ್ಯ ಅಲ್ಲದೇ ಇರುವ ಕನ್ನಡವನ್ನು ಕೇವಲ ಗೇಲಿ ಮಾಡುವುದಕ್ಕಷ್ಟೇ ಬಳಸುವುದು ಎನ್ನುವ ಕಾಲವಿತ್ತು. ಈಗ ಆಯಾ ಭಾಷೆಯಲ್ಲಿ ಇರುವ ಅಂತಃಸತ್ವವನ್ನು ಅರಿತಿದ್ದಾರೆ. ‘ಪೆದ್ರೊ’ದಲ್ಲಿ ಈ ಸೊಗಡಿದೆ. ಸಿನಿಮಾ ಭಾಷೆಯ ಬೆಳವಣಿಗೆ ‘ಪೆದ್ರೊ’ದಲ್ಲಿ ಚೆನ್ನಾಗಿದೆ. ಇಲ್ಲಿಯವರೆಗೆ ಪರಿಚಿತ ಇಲ್ಲದೇ ಇರುವ ಸಿನಿಮಾ ಭಾಷೆ ಇದರಲ್ಲಿದೆ. ಇತ್ತೀಚಿನ ದಿನಗಳಲ್ಲಿ ನನ್ನನ್ನು ಕಾಡಿದ್ದ ಸಿನಿಮಾಗಳೆಂದರೆ, ‘ತಿಥಿ’ ಹಾಗೂ ‘ಹರಿಕಥಾ ಪ್ರಸಂಗ’. ಇದಕ್ಕೆ ಸೇರ್ಪಡೆ ‘ಪೆದ್ರೊ’.60–70ರ ದಶಕದಲ್ಲಿ ಕನ್ನಡ ಸಿನಿಮಾಗಳಿಗಿದ್ದ ಸ್ಥಾನ ಇಳಿಯುತ್ತಾ, ಪ್ರಸ್ತುತ ತೀರಾ ಕೆಳಮಟ್ಟದಲ್ಲಿದೆ. ‘ಪೆದ್ರೊ’ದಂಥ ಕೆಲ ಸಿನಿಮಾಗಳು ಪುನಃ ನಮ್ಮನ್ನು ಆ ವೈಭವದ ಕಾಲಕ್ಕೆ ಕರೆದೊಯ್ಯುತ್ತವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.