
ಬೆಂಗಳೂರು:ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಪಡೆದಿರುವ ’ಪಿರಿಯಡ್.ಎಂಡ್ ಆಫ್ ಸೆಂಟೆನ್ಸ್’ ಚಿತ್ರ ಭಾರತದ ಗ್ರಾಮೀಣ ಮಹಿಳೆಯರ ಮುಟ್ಟಿನ ಕಥೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬದುಕಿನ ವ್ಯಥೆ ಅನಾವರಣಗೊಂಡಿದೆ, ಪ್ರಭಾವಯುತವಾಗಿ ಅದರ ಪ್ರಸ್ತುತ ಪಡಿಸಿರುವುದಕ್ಕೆ ಮೆಚ್ಚುಗೆಯೂ ಪಡೆದಿದೆ. ಚಿತ್ರದಲ್ಲಿ ಭಾಗಿಯಾದ ಹಳ್ಳಿಯ ಹೆಂಗಸರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಉತ್ತರ ಪ್ರದೇಶದ ಹಾಪುಡದ ಕಾಠಿ ಖೇರಾ ಗ್ರಾಮದಲ್ಲಿ ಸ್ನೇಹಾ ಅವರ ಮನೆಯಲ್ಲಿ ಸಂಭ್ರಮ ತುಂಬಿದೆ. ಋತುಸ್ರಾವದ ದಿನಗಳಲ್ಲಿ ಅನುಭವಿಸುತ್ತಿದ್ದ ನಿಷೇಧಗಳ ವಿರುದ್ಧ ಹೋರಾಡಿದ ಮಹಿಳೆಯರ ಕಥೆಯನ್ನು ಈ ಡಾಕ್ಯುಮೆಂಟರಿ ಒಳಗೊಂಡಿದೆ. ಸ್ನೇಹಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಋತುಸ್ರಾವದ ಬಗ್ಗೆ ಬೇರೂರಿರುವ ಅಪನಂಬಿಕೆಗಳ ವಿರುದ್ಧ ಭಾರತೀಯ ಮಹಿಳೆಯರ ಹೋರಾಟ ಮತ್ತು ಪ್ಯಾಡ್‌ಮ್ಯಾನ್ ಖ್ಯಾತಿಯ ಅರುಣಾಚಲಂ ಮುರುಗನಂಥಮ್ ನೈಜ ಬದುಕನ್ನು ಹೇಳುವ ಚಿತ್ರ ’ಪಿರಿಯಡ್.ಎಂಡ್ ಆಫ್ ಸೆಂಟೆನ್ಸ್’.
ಆಸ್ಕರ್ ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಪ್ರಶಸ್ತಿಗಳಿಸಿದೆ.91ನೇ ಅಕಾಡೆಮಿ ಪ್ರಶಸ್ತಿಗಳ ಡಾಕ್ಯುಮೆಂಟರಿ ವಿಭಾಗದಲ್ಲಿ ಒಟ್ಟು ಹತ್ತು ಸಿನಿಮಾಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ಇವುಗಳಲ್ಲಿ ಐದು ಸಿನಿಮಾಗಳು ನಾಮನಿರ್ದೇಶನಗೊಂಡಿದ್ದವು.
ಪ್ರವೇಶ ಪಡೆದಿದ್ದ 104 ಸಿನಿಮಾಗಳ ಪೈಕಿ ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್ ಪ್ರಶಸ್ತಿ ಗಿಟ್ಟಿಸಿದೆ. ಲಂಚ್‌ಬಾಕ್ಸ್ ಮತ್ತು ಮಸಾನ್‌ನಂತಹ ಸಿನಿಮಾಗಳನ್ನು ನಿರ್ಮಿಸಿದ ಸಿಖ್ಯಾ ಎಂಟರ್‌ಟೈನ್ಮೆಂಟ್ ಈ ಚಿತ್ರದ ಸಹ ನಿರ್ಮಾಣ ವಹಿಸಿದೆ ಹಾಗೂ ಗುನೀತ್ ಮೋಂಗಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗಳನ್ನುಪಡೆದಿರುವ ಇರಾನಿಯನ್–ಅಮೆರಿಕನ್ ನಿರ್ದೇಶಕಿ ರಾಯಕಾ ಜೆಚಾಬ್ಚಿ(Rayka zehtabchi) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲಾಸ್ ಏಂಜಲೀಸ್‌ನ ಓಕ್‌ವುಡ್ ಸ್ಕೂಲ್‌ನ ಉತ್ಸಾಹಿ ವಿದ್ಯಾರ್ಥಿಗಳ ಸಮೂಹ ಮತ್ತು ಅವರ ಶಿಕ್ಷಕರಾದ ಮೆಲಿಸ್ಸಾ ಬರ್ಟನ್ ಸ್ಥಾಪಿಸಿದ ಸಂಸ್ಥೆ ಪ್ಯಾಡ್ ಪ್ರಾಜೆಕ್ಟ್ ಚಿತ್ರ ನಿರ್ಮಾಣ ಕಾರ್ಯ ನಡೆಸಿದೆ. ಪ್ರಶಸ್ತಿ ಪಡೆದ ಬಳಿಕ ನಿರ್ದೇಶಕಿರಾಯಕಾ ಭಾರತೀಯ ಮಹಿಳೆಯರಿಗೆ ಧನ್ಯವಾದ ಅರ್ಪಿಸಿದ್ದಾರೆ;
ಉತ್ತರ ಪ್ರದೇಶದ ಹಾಪುಡ ಗ್ರಾಮದಲ್ಲಿ ಪ್ಯಾಡ್ ಉತ್ಪಾದಿಸುವ ಯಂತ್ರವನ್ನು ಅಳವಡಿಸಿದ ನಂತರದಲ್ಲಿ ಅಲ್ಲಿನ ಬಾಲಕಿಯರು ಮತ್ತು ಮಹಿಳೆಯರು ಕಂಡುಕೊಂಡ ಅನುಭವಗಳನ್ನು 26 ನಿಮಿಷಗಳ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಭಾರತದಲ್ಲಿಯೇ ಸುಲಭವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಕಥೆಯನ್ನೂ ಚಿತ್ರ ಒಳಗೊಂಡಿರುವುದಾಗಿ ವರದಿಯಾಗಿದೆ.
ಮುರುಗನಂಥಮ್ ಜೀವನದಿಂದ ಪ್ರೇರಣೆ ಪಡೆದು ಈಗಾಗಲೇ ಬಾಲಿವುಡ್‌ನಲ್ಲಿ ’ಪ್ಯಾಡ್ ಮ್ಯಾನ್’ ಸಿನಿಮಾ ಸಹ ತೆರೆಕಂಡಿದೆ. ಸಣ್ಣ ಗ್ರಾಮಗಳಲ್ಲಿಯೂ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ಅಳವಡಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಬಾರಿ ಮನ್ನಣೆ ದೊರೆತಿದೆ. ಮಹಿಳೆಯರು ಸಣ್ಣ ಉದ್ದಿಮೆ ಮೂಲಕ ಸ್ವಉದ್ಯೋಗ ಸೃಷ್ಟಿಕೊಳ್ಳುವ ಜತೆ ಆರೋಗ್ಯ ಸುಧಾರಣೆಯಲ್ಲಿಯೂ ಪರಿಣಾಮಕಾರಿಯಾಗಿದೆ.
ಕಾರ್ಯಕಾರಿ ನಿರ್ಮಾಪಕಿ ಗುನಮೀತ್ ಮೋಂಗಾ ಮಾತು:ಲಾಸ್ ಏಂಜಲೀಸ್‌ನ ಓಕ್‌ವುಡ್ ಸ್ಕೂಲ್‌ನ ಇಂಗ್ಲಿಷ್ ವಿಭಾಗದಲ್ಲಿ ಮೆಲಿಸ್ಸಾ ಬರ್ಟನ್ ಅವರಕೊಠಡಿಯಲ್ಲಿ ಮೊಳೆತ ಪುಟ್ಟ ಕನಸಿಗೆ ಈಗ 7 ವರ್ಷ. ಜಗತ್ತಿನಾದ್ಯಂತ ಯುವತಿಯರಿಗೆ ಜಾಗ್ರತಿ ಮೂಡಿಸಬೇಕು, ಋತುಚಕ್ರದ ಅವಧಿಯಲ್ಲಿ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸದ ತಿಳಿವಳಿಕೆ ಮೂಡಿಸುವ ಬಗ್ಗೆ ಚರ್ಚೆ ನಡೆದಿತ್ತು. ಹಣ ಸಂಗ್ರಹ ಪಡೆದು ಪ್ಯಾಡ್ ಸಿದ್ಧಪಡಿಸುವ ಯಂತ್ರವನ್ನು ಕೊಡುವ ಮೂಲಕ ಏಳು ವರ್ಷಗಳ ಹಿಂದೆಯೇ ಪ್ರಯತ್ನ ಪ್ರಾರಂಭವಾಗಿತ್ತು. ಆ ನಂತರ ಹೆಚ್ಚು ಜನರನ್ನು ತಲುಪಲು ಸಿನಿಮಾ ನಿರ್ಮಿಸುವ ನಿರ್ಧಾರ ಮಾಡಲಾಯಿತು ಎಂದು ಚಿತ್ರ ನಿರ್ಮಾಣದ ಹಿಂದಿನ ನೆನಪು ಮೆಲುಕು ಹಾಕಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಗಣ್ಯರು, ಸಿನಿಮಾ ಮಂದಿ ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಟ ಅಕ್ಷಯ್ ಕುಮಾರ್, ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪ್ಯಾಡ್‌ಮ್ಯಾನ್‌ಮುರುಗನಂಥಮ್ ಸೇರಿ ಅನೇಕರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.