ADVERTISEMENT

ದರ್ಶನ್‌ ಕ್ಲಿಕ್ಕಿಸಿರುವ ಛಾಯಾಚಿತ್ರ ಪ್ರದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 6:36 IST
Last Updated 2 ಮಾರ್ಚ್ 2019, 6:36 IST
‘ಲೈಫ್‌ ಆನ್‌ ದಿ ವೈಲ್ಡ್‌ ಸೈಡ್‌’ ಛಾಯಾಚಿತ್ರ ಪ್ರದರ್ಶನಕ್ಕೆ ಶುಕ್ರಚಾರ ಚಾಲನೆ ಲಭಿಸಿತು. ನಟ ದರ್ಶನ್‌, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ
‘ಲೈಫ್‌ ಆನ್‌ ದಿ ವೈಲ್ಡ್‌ ಸೈಡ್‌’ ಛಾಯಾಚಿತ್ರ ಪ್ರದರ್ಶನಕ್ಕೆ ಶುಕ್ರಚಾರ ಚಾಲನೆ ಲಭಿಸಿತು. ನಟ ದರ್ಶನ್‌, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಾರೆ   

ಮೈಸೂರು: ಚಲನಚಿತ್ರ ನಟ ದರ್ಶನ್‌ ಅವರು ಕ್ಲಿಕ್ಕಿಸಿರುವ ವನ್ಯಜೀವಿಗಳು ಮತ್ತು ಪಕ್ಷಿಗಳ ಛಾಯಾಚಿತ್ರ ಪ್ರದರ್ಶ ನಕ್ಕೆ ನಗರದ ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನಲ್ಲಿ ಶುಕ್ರವಾರ ಚಾಲನೆ ಲಭಿಸಿತು.

ವಿಶ್ವ ಅರಣ್ಯ ದಿನದ ಅಂಗವಾಗಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿರುವ ‘ಲೈಫ್‌ ಆನ್‌ ದಿ ವೈಲ್ಡ್‌ ಸೈಡ್‌’ ಛಾಯಾಚಿತ್ರ ಪ್ರದರ್ಶನ ಮಾರ್ಚ್‌ 3ರ ವರೆಗೆ ನಡೆಯಲಿದೆ.

ದರ್ಶನ್‌ ಕ್ಯಾಮೆರಾದಲ್ಲಿ ಸೆರೆಯಾದ ಹಲವು ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ. ಮರವೇರಿ ಕುಳಿತಿರುವ ಚಿರತೆ, ಗಂಭೀರವಾಗಿ ಹೆಜ್ಜೆ ಹಾಕುತ್ತಿರುವ ಹುಲಿ, ಜಿಂಕೆ, ಆನೆ, ಕಾಡುಕೋಣ, ವಿವಿಧ ಪ್ರಭೇದಗಳ ಪಕ್ಷಿಗಳ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ADVERTISEMENT

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡರು. ಛಾಯಾಚಿತ್ರ ಪ್ರದರ್ಶನ ವೀಕ್ಷಿಸಲು ಬಂದ ಅಂಗವಿಕಲ ಅಭಿಮಾನಿಯೊಬ್ಬರಿಗೆ ದರ್ಶನ್‌ ಅವರು ಛಾಯಾಚಿತ್ರವೊಂದನ್ನು ಉಡುಗೊರೆಯಾಗಿ ನೀಡಿದರು.

‘ವನ್ಯಜೀವಿ ಛಾಯಾಗ್ರಹಣ ಸವಾಲಿನ ಕೆಲಸ. ಕಾಡುಪ್ರಾಣಿಗಳ ಚಿತ್ರಗಳನ್ನು ವಿವಿಧ ಭಂಗಿಗಳಲ್ಲಿ ಸೆರೆಹಿಡಿಯಲು ಸುಮಾರು ಹೊತ್ತ ಕಾದು ಕುಳಿತಿರಬೇಕು. ವನ್ಯಜೀವಿ ಛಾಯಾಗ್ರಹಣದಿಂದ ತಾಳ್ಮೆಯನ್ನು ಕಲಿತೆ’ ಎಂದು ದರ್ಶನ್‌ ಹೇಳಿದರು.

‘ಪಕ್ಷಿಯೊಂದರ ಫೋಟೊ ಕ್ಲಿಕ್ಕಿಸಲು ಸುಮಾರು ಎಂಟು ಗಂಟೆ ಕಾದು ಕುಳಿತಿದ್ದೆ. ಅಷ್ಟು ಹೊತ್ತು ಕಾದಿದ್ದರೂ ಆ ಪಕ್ಷಿ ಕೇವಲ ಐದು ಸೆಕೆಂಡು ಕಾಣಿಸಿಕೊಂಡು ಬಳಿಕ ಹಾರಿಹೋಯಿತು. ಆ ಕ್ಷಣದಲ್ಲಿ ಕ್ಲಿಕ್ಕಿಸಿಕೊಂಡೆ. ಅಂತಹ ಚಿತ್ರಗಳು ತುಂಬಾ ಖುಷಿ ಕೊಡುತ್ತವೆ’ ಎಂದರು.

ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಪ್ರದರ್ಶನ ಇರಲಿದ್ದು, ಛಾಯಾಚಿತ್ರಗಳು ಮಾರಾಟಕ್ಕೂ ಲಭ್ಯವಿವೆ. ಮಾರಾಟದಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಸಲಾಗುತ್ತದೆ. ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವ ದರ್ಶನ್‌ ಅವರು ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.