ಸಂಗೀತ ಲೋಕದಿಂದ ಬಣ್ಣದ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿರುವ ಗಾಯಕಿ ಚೈತ್ರ ಎಚ್.ಜಿ. ‘ಮಾವು–ಬೇವು’ ಸವಿದಿದ್ದಾರೆ. ಸುಚೇಂದ್ರ ಪ್ರಸಾದ್ ನಿರ್ದೇಶನದ ಹೊಸ ಚಿತ್ರದಲ್ಲಿ ‘ನೂಪುರ್’ ಎಂಬ ಪಾತ್ರ ನಿರ್ವಹಿಸಿರುವ ಚೈತ್ರ, ಒಳ್ಳೆಯ ಅವಕಾಶಗಳು, ಪಾತ್ರ ದೊರೆತರೆ ನಟನೆಯನ್ನು ಮುಂದುವರಿಸುವ ಅಭಿಲಾಷೆಯನ್ನೂ ಹೊಂದಿದ್ದಾರೆ. ನಾಲ್ಕು ದಶಕಗಳ ಹಿಂದಿನ ಖ್ಯಾತ ಗೀತಗುಚ್ಛ ‘ಮಾವು–ಬೇವು’ ಸಿನಿಮಾ ರೂಪ ಪಡೆದು ಇಂದು(ಏ.21) ಬಿಡುಗಡೆಯಾಗುವ ಹೊತ್ತಿನಲ್ಲಿ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದು ಚೈತ್ರ ಹೀಗಂದರು...
‘ನಮ್ಮದು ತೆರೆ ಹಿಂದಿನ ಕೆಲಸ. ಹಾಡುವುದೇ ಜೀವನ. ಕಳೆದ ವರ್ಷ ‘ಅಭಿನಯ ತರಂಗ’ ಸಂಸ್ಥೆಯಲ್ಲಿ ನಟನೆಯಲ್ಲಿ ಡಿಪ್ಲೊಮಾ ಕೋರ್ಸ್ ಮಾಡಿದ್ದೆ. ಬಣ್ಣದ ಲೋಕಕ್ಕೆ ಹೆಜ್ಜೆ ಇಡಬೇಕು ಎಂದುಕೊಂಡು ಈ ತರಬೇತಿ ಪಡೆದಿರಲಿಲ್ಲ. ನಟನೆ ನನ್ನ ಹವ್ಯಾಸವಾಗಿತ್ತು. ಈ ತರಬೇತಿ ಬಳಿಕ ಒಮ್ಮೆ ಸುಚೇಂದ್ರ ಪ್ರಸಾದ್ ಅವರು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಸಿಕ್ಕಿದ್ದರು. ಆ ಸಂದರ್ಭದಲ್ಲಿ ನಡೆದ ಮಾತುಕತೆ ವೇಳೆ ನಟನೆಯ ತರಬೇತಿ ಪಡೆದಿರುವ ಬಗ್ಗೆ ನಾನು ಉಲ್ಲೇಖಿಸಿದೆ. ಆ ವೇಳೆ ‘ನಟಿಸುವುದಕ್ಕೆ ಆಸಕ್ತಿ ಇದೆಯೇ’ ಎಂದು ತಕ್ಷಣದಲ್ಲೇ ಅವರು ಕೇಳಿದ್ದರು. ಆ ಕ್ಷಣದಲ್ಲಿ ನಾನು ಉತ್ತರ ನೀಡಿರಲಿಲ್ಲ. ಇದಾಗಿ 15–20 ದಿನದ ಬಳಿಕ ಕರೆ ಮಾಡಿ, ‘ಮಾವು–ಬೇವು’ ಸಿನಿಮಾ ಬಗ್ಗೆ ಪ್ರಸ್ತಾಪಿಸಿ, ‘ನಾಯಕಿಯಾಗಿ ನಟಿಸುತ್ತೀರಾ’ ಎಂದು ಕೇಳಿದರು. ಆ ಕ್ಷಣದಲ್ಲಿ ನಾನು ಹೆದರಿದ್ದೆ. ಏಕಾಏಕಿ ಈ ರೀತಿ ಅವಕಾಶ ಬಂದಾಗ ಹೇಗೆ ಸ್ವೀಕರಿಸಬೇಕು ಎನ್ನುವುದೂ ತಿಳಿದಿರಲಿಲ್ಲ. ಆದರೆ ನನ್ನ ನಟನೆಯ ಸಾಮರ್ಥ್ಯಕ್ಕಿಂತ ಸುಚೇಂದ್ರ ಪ್ರಸಾದ್ ಅವರ ಪ್ರತಿಭೆ, ಅವರ ನಿರ್ದೇಶನ ಸಾಮರ್ಥ್ಯದ ಬಗ್ಗೆ ನಂಬಿಕೆ ಇದ್ದ ಕಾರಣ ಒಪ್ಪಿಕೊಂಡೆ’ ಎನ್ನುತ್ತಾರೆ ಚೈತ್ರ.
‘ಚಿತ್ರಕ್ಕಾಗಿ ಕಲಾವಿದರ ನಡುವೆ ಹೊಂದಾಣಿಕೆ ಮೂಡಿಸಲು ಹಲವು ದಿನ ಕಾರ್ಯಾಗಾರ ಮಾಡಿದ್ದೆವು. ಆಂಗಿಕ ಅಭಿನಯ, ಸಂಭಾಷಣೆ, ಉಡುಗೆಯ ಬಗ್ಗೆ ವಿಸ್ತೃತವಾದ ಚರ್ಚೆ ಈ ಸಂದರ್ಭದಲ್ಲಿ ಆಯಿತು. ಇದಾದ ಬಳಿಕವಷ್ಟೇ ಚಿತ್ರೀಕರಣಕ್ಕೆ ಇಳಿದಿದ್ದೆವು. ಈ ರೀತಿಯ ಅಭಿನಯವೇ ಬೇಕು, ಪಾತ್ರ ಹೀಗಿಯೇ ಇರಬೇಕು; ವರ್ತಿಸಬೇಕು ಎಂಬ ಸ್ಪಷ್ಟ ಕಲ್ಪನೆ ಸುಚೇಂದ್ರ ಪ್ರಸಾದ್ ಅವರಲ್ಲಿದ್ದ ಕಾರಣ ನಟನೆ ಸುಲಭವಾಯಿತು. ವಾಸ್ತವದಲ್ಲಿ ಚಿತ್ರದಲ್ಲಿನ ನನ್ನ ಪಾತ್ರಕ್ಕೂ ವೈಯಕ್ತಿಕವಾದ ನನ್ನ ಬದುಕಿಗೂ ದೂರದೂರಕ್ಕೂ ಸಂಬಂಧವಿಲ್ಲ. ನಟನೆ ಎಂದರೆ ಉಡುಗೆ, ಮೇಕ್‌ಅಪ್ ಎನ್ನುವ ಭ್ರಮೆಯನ್ನು ಸುಚೇಂದ್ರ ಪ್ರಸಾದ್ ಅವರು ನಮ್ಮಿಂದ ತೊಡೆದು ಹಾಕಿದರು. ಪರಕಾಯ ಪ್ರವೇಶ ಎನ್ನುವ ಮಾತಿನ ಮೇಲೆ ಅವರಿಗೆ ನಂಬಿಕೆ ಇಲ್ಲ. ನಟನೇ ಅಲ್ಲಿ ಪಾತ್ರವನ್ನು ನಿರ್ವಹಿಸುತ್ತಾನೆ, ಆದರೆ ವೀಕ್ಷಕರಿಗೆ ಅದು ತಿಳಿಯಬಾರದು ಅಷ್ಟೇ ಎನ್ನುವುದು ಅವರ ಮಾತು. ಹೀಗೆ ಅವರು ನಮಗೆ ಸ್ಫೂರ್ತಿ ತುಂಬಿದರು’ ಎಂದು ಚಿತ್ರೀಕರಣದ ಸಮಯವನ್ನು ಮೆಲುಕಿ ಹಾಕಿದರು.
‘ಹಾಡುಗಾರಿಕೆಯಲ್ಲಿ ನಾವು ಕೇವಲ ಧ್ವನಿಯ ಏರಿಳಿತದ ಬಗ್ಗೆಯಷ್ಟೇ ಯೋಚನೆ ಮಾಡುತ್ತಿರುತ್ತೇವೆ. ಆದರೆ ತಲೆಯಿಂದ ಕಾಲಿನವರೆಗೂ ಮಾಡುವ ಅಭಿನಯವನ್ನು ವೀಕ್ಷಕರು ಗಮನಿಸುತ್ತಿರುತ್ತಾರೆ. ಇದು ನನಗೆ ಸವಾಲಾಗಿತ್ತು. ಈ ಸಿನಿಮಾ ಒಂದು ಹೊಸ ಪ್ರಯೋಗ. ಸಿದ್ಧವಿದ್ದ 10 ಹಾಡುಗಳನ್ನು ಇಟ್ಟುಕೊಂಡೇ ಇಲ್ಲಿ ಕಥೆ ಹೆಣೆಯಲಾಗಿದೆ. ಹಾಡುಗಳನ್ನು ಆಧರಿಸಿ ಸಿನಿಮಾವಿದೆ ಎನ್ನುವಾಗಲೇ ನಾನು ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೆ. ಏಕೆಂದರೆ ಸಿ.ಅಶ್ವಥ್ ಹಾಗೂ ಎಸ್.ಪಿ.ಬಿ. ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಮಾವು–ಬೇವು’ ಇಂದಿಗೂ ಹಸಿರಾಗಿದೆ. ಇಂಥ ಹಾಡುಗಳು ಇರುವ ಸಿನಿಮಾದಲ್ಲಿ ನಟಿಸುವುದೇ ಭಾಗ್ಯ. ಈ ಕಥೆ ವಾಸ್ತವಕ್ಕೆ ಹತ್ತಿರವಾಗಿದೆ. ಹಾಡುಗಳು ಹಳೆಯದಾದರೂ ಸನ್ನಿವೇಷಗಳು ಪ್ರಸ್ತುತ. ಸದ್ಯದ ಸಮಾಜದಲ್ಲಿರುವ ಕುಟುಂಬ ವ್ಯವಸ್ಥೆ, ಪತಿ–ಪತ್ನಿ ನಡುವಿನ ಮನಃಸ್ತಾಪ, ವಿಚ್ಛೇದನ ಮುಂತಾದ ವಿಷಯಗಳು ಚರ್ಚೆಯಾಗಿವೆ. ಜನರು ಸಿನಿಮಾ ಬಗ್ಗೆ ಏನೇ ಅಭಿಪ್ರಾಯ ನೀಡಿದರೂ, ಇದೊಂದು ಕಾಲ್ಪನಿಕ ಕಥೆ ಅಷ್ಟೇ’ ಎಂದು ಹೇಳಲಿಚ್ಛಿಸುತ್ತೇನೆ ಎಂದರು ಚೈತ್ರ.
ನಟನೆ ಮತ್ತು ಸಂಗೀತ ಎನ್ನುವ ಎರಡು ದೋಣಿಯಲ್ಲಿ ನಿಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆಗೆ, ‘ನಟನೆ ಎನ್ನುವುದು ನನ್ನ ಜೀವನದ ಹೊಸ ಪ್ರಯೋಗ. ಎರಡನೇ ವಯಸ್ಸಿನಿಂದಲೇ ನಾನು ಹಾಡುತ್ತಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದೇನೆ. ಜೀವನದಲ್ಲಿ ಒಂದು ಟ್ವಿಸ್ಟ್ ದೊರಕಿ ನಟಿ ಆಗಿದ್ದೇನೆ. ಸಿನಿಮಾವಷ್ಟೇ ಅಲ್ಲದೆ ಧಾರಾವಾಹಿಗಳಲ್ಲೂ ನಟಿಸುವ ಆಫರ್‌ಗಳು ಬಂದಿದ್ದವು. ಮುಂದೆ ಒಳ್ಳೆಯ ಅವಕಾಶ, ಕಥೆ, ಪಾತ್ರ ದೊರಕಿದರೆ ಖಂಡಿತವಾಗಿಯೂ ನಟನೆ ಮುಂದುವರಿಸುತ್ತೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.