ADVERTISEMENT

ಟಗರು ಚಹರೆ ಮೀರಿದ ಮಂಕಿ ಸೀನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 19:30 IST
Last Updated 30 ಜನವರಿ 2020, 19:30 IST
‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಚಿತ್ರದಲ್ಲಿ ಧನಂಜಯ್
‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಚಿತ್ರದಲ್ಲಿ ಧನಂಜಯ್   

‘ಟಗರು’ ಚಿತ್ರದ ಯಶಸ್ಸಿನ ಬಳಿಕ ದುನಿಯಾ ಸೂರಿ ನಿರ್ದೇಶನದ ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ನಿರೀಕ್ಷೆ ಹೆಚ್ಚಿಸಿರುವ ಚಿತ್ರ. ಮನುಷ್ಯನ ಸಂಬಂಧ ಮತ್ತು ಮಾಫಿಯಾ ಸುತ್ತ ಈ ಚಿತ್ರದ ಕಥೆ ಹೊಸೆಯಲಾಗಿದೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಇದರ ನಾಯಕ. ಚಿತ್ರದಲ್ಲಿ ಅವರದು ಮಂಕಿ ಸೀನ ಎಂಬ ರೌಡಿಯ ಪಾತ್ರ.

ಈಗಾಗಲೇ, ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿವೆ. ಫೆಬ್ರುವರಿಯ ಮೊದಲ ವಾರ ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು. ‘ಸಿನಿಮಾವು ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿದೆ. ಈ ತಿಂಗಳ ಅಂತ್ಯಕ್ಕೆ ಪ್ರಮಾಣ ಪತ್ರ ಸಿಗುವ ನಿರೀಕ್ಷೆಯಿದೆ’ ಎಂಬುದು ಸೂರಿ ಅವರ ವಿವರಣೆ.

ಕಥೆ, ನಿರೂಪಣಾ ಶೈಲಿಯಲ್ಲಿ‘ಟಗರು’ ಮತ್ತು ಈ ಚಿತ್ರಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಹೊಸಬಗೆಯ ನಿರೂಪಣಾ ಶೈಲಿಯೇ ಈ ಚಿತ್ರದ ವಿಶೇಷ. ಈ ಸಿನಿಮಾದಲ್ಲಿ ಸೂರಿ ಕಥೆ ಹೇಳುವ ವಿಭಿನ್ನವಾದ ಶೈಲಿಯು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.

ADVERTISEMENT

ಈ ಸಿನಿಮಾದಲ್ಲಿ ಹೀರೊಯಿಸಂ ಇಲ್ಲವಂತೆ. ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್‌ ಚಿತ್ರ. ಕಥೆಯೇ ಇದರ ನಿಜವಾದ ಹೀರೊ. ಪ್ರತಿಯೊಬ್ಬರ ಜೀವನದಲ್ಲಿ ನಡೆದಿರುವ ಘಟನೆಗಳನ್ನೇ ನಿರ್ದೇಶಕರು ಹೇಳಲು ಹೊರಟಿದ್ದಾರಂತೆ. ಎರಡು ಗಂಟೆಯಲ್ಲಿ ವ್ಯಕ್ತಿಯೊಬ್ಬನ ಏಳು ವರ್ಷದ ಜೀವನವನ್ನು ಕಟ್ಟಿಕೊಡಲಾಗಿದೆ. ಭೂಗತ ಲೋಕದಲ್ಲಿರುವ ಸಂಬಂಧಗಳ ಬಗ್ಗೆಯೂ ಸಿನಿಮಾ ಮಾತನಾಡುತ್ತದೆಯಂತೆ.

ಈಗಾಗಲೇ, ಜಯಂತ ಕಾಯ್ಕಿಣಿ ಅವರ ಪುತ್ರ ಋತ್ವಿಕ್‌ ಕಾಯ್ಕಿಣಿ ಬರೆದಿರುವ ‘ಮಾದೇವ...’ ಹಾಡು ಬಿಡುಗಡೆಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಸಂಚಿತ್‌ ಹೆಗ್ಗಡೆ ಧ್ವನಿಯಾಗಿದ್ದಾರೆ.

ಸೂರಿ ಮತ್ತು ಅಮೃತ್‌ ಭಾರ್ಗವ್ ಜೊತೆಗೂಡಿ ಇದರ ಕಥೆ ಹೆಣೆದಿದ್ದಾರೆ. ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ದೀಪು ಎಸ್‌. ಕುಮಾರ್‌ ಅವರದ್ದು. ಸುಧೀರ್‌ ಕೆ.ಎಂ. ಬಂಡವಾಳ ಹೂಡಿದ್ದಾರೆ. ನಿವೇದಿತಾ, ಅಮೃತಾ ಅಯ್ಯಂಗಾರ್, ‘ಕಾಕ್ರೋಚ್‌’ ಸುಧಿ, ರೇಖಾ, ಸಪ್ತಮಿ ಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.