ADVERTISEMENT

ತಂದೆ ಡಾ.ರಾಜ್‌ ಹುಟ್ಟೂರಲ್ಲಿ ‘ಪವರ್‌ಸ್ಟಾರ್‌’ ಪುನೀತ್‌ ರಾಜ್‌ಕುಮಾರ್

ದೊಡ್ಡ ಗಾಜನೂರಿನಲ್ಲಿ ಪುನೀತ್‌ ರಾಜ್‌ಕುಮಾರ್‌, ಚಿತ್ರೀಕರಣದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 15:47 IST
Last Updated 24 ಡಿಸೆಂಬರ್ 2020, 15:47 IST
ದೊಡ್ಡ ಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್‌ ಅವರು ಜನಿಸಿದ ‌ಮನೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಭೇಟಿ ನೀಡಿದರು
ದೊಡ್ಡ ಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್‌ ಅವರು ಜನಿಸಿದ ‌ಮನೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಭೇಟಿ ನೀಡಿದರು   
""
""

ಚಾಮರಾಜನಗರ: ಕನ್ನಡದ ಖ್ಯಾತ ನಟ ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರು ಗುರುವಾರ ತಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು, ತಾಳವಾಡಿ ಸಮೀಪದ ದೊಡ್ಡ ಗಾಜನೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡರು.

ತಮ್ಮದೇ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಮೂರು ದಿನಗಳಿಂದ ತೊಡಗಿದ್ದ ಅವರು ಗುರುವಾರ ತಂದೆಯ ಹುಟ್ಟಿದ ಮನೆ, ಅವರು ಓಡಾಡಿದ ಜಾಗಗಳಿಗೆ ಭೇಟಿ ನೀಡಿದರು.

ದೊಡ್ಡ ಗಾಜನೂರಿನಲ್ಲಿರುವ ಡಾ.ರಾಜ್‌ ಅವರು ಹುಟ್ಟಿರುವ ಮನೆ,ಗಾಜನೂರಿಗೆ ಬಂದಾಗಲೆಲ್ಲ ರಾಜ್‌ಕುಮಾರ್‌ ಅವರು ಭೇಟಿ ನೀಡುತ್ತಿದ್ದ ಜಮೀನಿನಲ್ಲಿರುವ ದೊಡ್ಡ ಆಲದಮರದ ಬಳಿಗೆ ತೆರಳಿ ಸಮಯ ಕಳೆದರು.

ADVERTISEMENT
ಸೋದರತ್ತೆ ನಾಗಮ್ಮ ಅವರೊಂದಿಗೆ ಪುನೀತ್‌

ಪುನೀತ್‌ ಅವರು ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ, ಸುತ್ತಮುತ್ತಲಿನ ಜನರು ಅವರ ಮನೆಯ ಮುಂದೆ ನೆರೆದರು. ಮನೆಯಿಂದ ಬಂದ ಪುನೀತ್‌, ಅವರೊಂದಿಗೂ ಬೆರೆತರು. ಅಭಿಮಾನಿಗಳು, ಸೆಲ್ಫಿ, ಫೋಟೊಗೆ ಮುಗಿಬಿದ್ದರು. ಚಾಮರಾಜನಗರದಿಂದಲೂ ಹೋಗಿದ್ದ ಕೆಲವು ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.

ಪುನೀತ್‌ ರಾಜ್‌ಕುಮಾರ್‌ ಅವರು ದೊಡ್ಡ ಗಾಜನೂರು ಭೇಟಿಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಂಗಳವಾರದಿಂದ ಇಲ್ಲೇ ವಾಸ್ತವ್ಯ ಹೂಡಿದ್ದ ಪುನೀತ್‌ ರಾಜ್‌ಕುಮಾರ್‌ ಅವರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೂಡಿಪಡಗ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವನ್ಯಜೀವಿಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ. ಚಿತ್ರೀಕರಣಕ್ಕಾಗಿ ಅರಣ್ಯ ಇಲಾಖೆ ಅನುಮತಿಯನ್ನೂ ನೀಡಿತ್ತು.

ಡಾ.ರಾಜ್‌ ಕುಮಾರ್‌ ಅವರು ಇಷ್ಟಪಡುತ್ತಿದ್ದ ದೊಡ್ಡ ಆಲದ ಮರದ ಬುಡದಲ್ಲಿ ‘ಪವರ್‌ ಸ್ಟಾರ್‌’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.