ADVERTISEMENT

ಜುಲೈ 2ಕ್ಕೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಸಿನಿ ಸಮ್ಮಾನ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 23:32 IST
Last Updated 29 ಜೂನ್ 2023, 23:32 IST
   

ತಾರೆಯರ ಸಮಾಗಮ. ಸಾಂಸ್ಕೃತಿಕ ಕಾರ್ಯಕ್ರಮಗಳ ರಸಾನುಭವ. ಹಿರಿಯರಿಂದ ಹೊಸಬರವರೆಗೆ ಪ್ರಶಸ್ತಿಯ ಗರಿ ಮೂಡಿಸಿಕೊಂಡವರ ಸಂಭ್ರಮ... ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮ ಇಂತಹ ಹಲವು ಕ್ಷಣಗಳನ್ನು ಮೊಗೆದು ಕೊಟ್ಟಿತ್ತು. ಅದರ ಸಾರಸತ್ವವನ್ನು ಕಿರುತೆರೆಯ ಮೇಲೆ ನೋಡುವ ಅವಕಾಶ ಇದೇ ಜುಲೈ 2 ರಂದು ಸಂಜೆ 6.30ಕ್ಕೆ ರಾಜ್ಯದ ಪ್ರೇಕ್ಷಕರಿಗೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಜಾವಾಣಿ@75 ಸಂಭ್ರಮದ ಅಂಗವಾಗಿ ಇತ್ತೀಚೆಗಷ್ಟೇ ಪ್ರೆಸ್ಟೀಜ್ ಶ್ರೀಹರಿಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದಲ್ಲಿ ಚೊಚ್ಚಲ ’ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ‘ ಸಮಾರಂಭ ನಡೆದಿತ್ತು. ಬದುಕಿನ ಅಮೃತ ವರ್ಷ ಆಚರಿಸಿಕೊಂಡಿರುವ ಕನ್ನಡದ ಬಹುಮುಖ ಪ್ರತಿಭೆ ಅನಂತ ನಾಗ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಿದ್ದರು. ಈ ಕ್ಷಣಕ್ಕೆ ಚಿತ್ರರಂಗ, ಸಾಹಿತ್ಯ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಸಾಕ್ಷಿಯಾಗಿದ್ದರು.

2022ರಲ್ಲಿ ತೆರೆಕಂಡ ಸಿನಿಮಾಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿತ್ತು. ಹಿರಿಯ ನಟಿ ಉಮಾಶ್ರೀ, ನಟ ರಿಷಬ್‌ ಶೆಟ್ಟಿ ಸೇರಿ ಹಲವಾರು ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.

ADVERTISEMENT

ಇದೇ ಭಾನುವಾರ ಸಂಜೆ 6.30ರಿಂದ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಅರ್ಜುನ್‌ ಜನ್ಯ ತಂಡದ ಸಂಗೀತ ರಸಮಂಜರಿ, ನಟಿ ಹರಿಪ್ರಿಯಾ–ವಸಿಷ್ಠ ಸಿಂಹ ಜೋಡಿಯ ನೃತ್ಯ ಸೇರಿದಂತೆ ಮನರಂಜನೆ ಮಹಾಪೂರವೇ ಹರಿಯಲಿದೆ. ರಮೇಶ್‌ ಅರವಿಂದ್‌ ಹಾಗೂ ಅನುಶ್ರೀ ನಿರೂಪಣೆ ಕಾರ್ಯಕ್ರಮದ ಆಕರ್ಷಣೆ. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಸ್ತುತ ಪ್ರಾಯೋಜಕತ್ವ ವಹಿಸಿದ್ದ ಕಾರ್ಯಕ್ರಮ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.