ADVERTISEMENT

‘ನಟರಾಕ್ಷಸ’ ಧನಂಜಯ್‌ ಹೊಸ ಚಿತ್ರಕ್ಕೆ ಪ್ರಿಯಾ ಭವಾನಿ ನಾಯಕಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 10:23 IST
Last Updated 17 ಅಕ್ಟೋಬರ್ 2022, 10:23 IST
ಪ್ರಿಯಾ ಭವಾನಿ ಶಂಕರ್‌
ಪ್ರಿಯಾ ಭವಾನಿ ಶಂಕರ್‌   

‘ನಟರಾಕ್ಷಸ’ ಡಾಲಿ ಧನಂಜಯ್ ಸದ್ಯ ತನ್ನದೇ ಪ್ರೊಡಕ್ಷನ್‌ನ ‘ಹೆಡ್‌ಬುಷ್‌’ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ನಡುವೆ ಹಲವು ಹೊಸ ಸಿನಿಮಾಗಳಿಗೂ ಕಾಲ್‌ಶೀಟ್‌ ನೀಡಿದ್ದಾರೆ. ‘ಪುಷ್ಪ’ ಸಿನಿಮಾ ಮೂಲಕ ಟಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದ ಧನಂಜಯ್‌, ಇದೀಗ ಮತ್ತೊಮ್ಮೆ ಅತ್ತ ಹೆಜ್ಜೆ ಹಾಕಿದ್ದಾರೆ. ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ತಮಿಳಿನ ನಟಿ ಪ್ರಿಯಾ ಭವಾನಿ ಶಂಕರ್‌ ತಂಡ ಸೇರಿಕೊಂಡಿದ್ದಾರೆ.

ಇದು ಧನಂಜಯ್ ಅವರ 26ನೇ ಸಿನಿಮಾ. ಈ ಹಿಂದೆ ತೆಲುಗಿನಲ್ಲಿ ‘ಪೆಂಗ್ವಿನ್’ ಎಂಬ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್, ಡಾಲಿ-ಸತ್ಯದೇವ್ ನಟನೆಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಕ್ರೈಮ್ ಆ್ಯಕ್ಷನ್‌ ಎಂಟರ್‌ಟೈನರ್‌ ಕಥಾಹಂದರದ ಈ ಸಿನಿಮಾ, ತೆಲುಗು ಹಾಗೂ ಕನ್ನಡದಲ್ಲಿ ತೆರೆಕಾಣಲಿದೆ. ಸದ್ಯ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ ನಾಯಕಿಯೊಬ್ಬರನ್ನು ಪರಿಚಯಿಸಿದೆ.

‘ಓಹ್ ಮನಪೆಣ್ಣೆ’, ‘ಬ್ಲಡ್ ಮನಿ’, ‘ತಿರುಚಿತ್ರಂಬಲಂ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಭವಾನಿ ಶಂಕರ್‌ ಅವರಿಗೆ ಇದು ತೆಲುಗಿನ ಮೊದಲ ಚಿತ್ರ. ಚಿತ್ರದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ಅವರು ನಟಿಸಲಿದ್ದು, ಚಿತ್ರದ ಇನೊಬ್ಬ ನಾಯಕಿಯನ್ನು ಸದ್ಯದಲ್ಲೇ ಪರಿಚಯಿಸಲಿದ್ದೇವೆ ಎಂದಿದೆ ಚಿತ್ರತಂಡ. ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.

ADVERTISEMENT

‘ಟಗರು’ ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆಯನ್ನೂ ಬಿಡುಗಡೆಗೊಳಿಸಲಿದ್ದೇವೆ ಎಂದಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.