ADVERTISEMENT

ಪೊಲೀಸ್‌ ಅಧಿಕಾರಿಯಾದ್ರು ಪ್ರಿಯಾಂಕ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 14:31 IST
Last Updated 1 ಏಪ್ರಿಲ್ 2021, 14:31 IST
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ   

ಸೆಕೆಂಡ್‌ ಹಾಫ್‌ ಚಿತ್ರದಲ್ಲಿ ಪೊಲೀಸ್‌ ಪೇದೆಯಾಗಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕ ಉಪೇಂದ್ರ ಇದೀಗ ಪೊಲೀಸ್‌ ಅಧಿಕಾರಿಯಾಗಿ ಬಡ್ತಿ ಪಡೆದಿದ್ದಾರೆ. ಗುರುಮೂರ್ತಿ ನಿರ್ದೇಶನದ ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ‘ಉಗ್ರಾವತಾರ’ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ.

ರುಪ್ಪೀಸ್‌ ರೆಸಾರ್ಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ತಮ್ಮ ಪಾತ್ರದ ಕುರಿತು ವಿವರಣೆ ನೀಡಿದ ಪ್ರಿಯಾಂಕ, ‘ಮೊದಲ ಬಾರಿ ಆ್ಯಕ್ಷನ್‌ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರದ ಕಥೆ ನನಗೆ ಇಷ್ಟವಾಯಿತು. ಕಳೆದ ವರ್ಷವೇ ಚಿತ್ರೀಕರಣ ಆರಂಭಿಸಿದ್ದೆವು, ಇದೀಗ ಚಿತ್ರೀಕರಣದ ಕೊನೆಯ ಹಂತದಲ್ಲಿದ್ದೇವೆ. ಆ್ಯಕ್ಷನ್‌ ಚಿತ್ರಕ್ಕಾಗಿ ಹೆಚ್ಚಿನ ವರ್ಕ್‌ಔಟ್‌ ಮಾಡಿದ್ದೇನೆ. ಮಹಿಳೆಯರ ಮೇಲಿನ ದೌರ್ಜನ್ಯ, ಪೊಲೀಸ್‌ ಇಲಾಖೆಯಲ್ಲಿ ಮಹಿಳೆ, ಮಹಿಳೆಯರ ಸಬಲೀಕರಣ ಹೀಗೆ ಹಲವು ವಿಷಯಗಳು ಚಿತ್ರದಲ್ಲಿದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವು ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದರು.

‘ಇದೊಂದು ಆ್ಯಕ್ಷನ್‌ ಚಿತ್ರ, ಹೀಗಾಗಿ ಸಾಹಸ ದೃಶ್ಯಗಳು ನನಗೆ ಬಹಳ ಕಷ್ಟವಾಯಿತು, ಸವಾಲಾಗಿ ಈ ಪಾತ್ರವನ್ನು ಸ್ವೀಕರಿಸಿದ್ದೇನೆ. ಚಿತ್ರಕ್ಕಾಗಿ ರೋಪ್‌ ಟ್ರೈನಿಂಗ್‌, ಬಾಕ್ಸಿಂಗ್‌ ಕಲಿತಿದ್ದೇನೆ. ಗನ್‌ ಬಳಸುವುದು, ಚೇಸಿಂಗ್‌ ಮುಂತಾದುವುಗಳನ್ನು ಸಾಹಸ ನಿರ್ದೇಶಕರು ಕಲಿಸಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿನ ಮಹಿಳಾ ಪೊಲೀಸ್‌ ಅಧಿಕಾರಿಗಳ ಸ್ಫೂರ್ತಿ ಪಡೆದು, ಅವರ ಕಾರ್ಯವೈಖರಿಯ ವಿಡಿಯೊಗಳನ್ನು ನೋಡಿ ನಾನು ಈ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.