
ನಿರ್ದೇಶಕ ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ನಟಿ ಪ್ರಿಯಾಂಕಾ ಮೋಹನ್ ಹೇಗಿರಲಿದ್ದಾರೆ ಎನ್ನುವ ಪ್ರಶ್ನೆಗೆ ಚಿತ್ರತಂಡ ಉತ್ತರಿಸಿದೆ. ಪ್ರಿಯಾಂಕಾ ಪಾತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ರೆಟ್ರೊ ಲುಕ್‌ನಲ್ಲಿ ಅವರು ಮಿಂಚಿದ್ದಾರೆ.
ಈಗಾಗಲೇ ಚಿತ್ರದ ಮೂರು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಹಾಕಲಾಗಿರುವ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಾಲ್ಕನೇ ಹಂತದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ. ಫೆಬ್ರುವರಿ–ಮಾರ್ಚ್‌ನಲ್ಲಿ ಶೂಟಿಂಗ್ ಪೂರ್ಣಗೊಳಿಸಲು ಹೇಮಂತ್ ಯೋಜನೆ ಹಾಕಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಲುಕ್‌ನ ಎರಡು ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಒಂದರಲ್ಲಿ ಪ್ರಿಯಾಂಕಾ ಅವರ ಕಿವಿಯಲ್ಲಿರುವ ಇಯರ್‌ಬಡ್ ಸಿನಿಮಾದೊಳಗೆ ಟೈಂಟ್ರಾವೆಲ್ ಕಥೆಯ ಸುಳಿವು ನೀಡಿದೆ. ಈ ಮೂಲಕ ಅವರ ಪಾತ್ರದ ಬಗ್ಗೆ ಕುತೂಹಲ ಹುಟ್ಟಿಸಿದೆ ಚಿತ್ರತಂಡ.
ಶಿವರಾಜ್‌ಕುಮಾರ್, ಧನಂಜಯ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 70ರ ದಶಕದ ಶೈಲಿಯಲ್ಲಿರಲಿದೆ. ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಪ್ರಿಯಾಂಕಾ, ತೆಲುಗಿನ ‘ಗ್ಯಾಂಗ್‌ಲೀಡರ್’, ‘ಸರಿಪೋದ ಶನಿವಾರಂ’, ತಮಿಳಿನ ‘ಡಾಕ್ಟರ್’, ‘ಕ್ಯಾಪ್ಟನ್ ಮಿಲ್ಲರ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಡಾ. ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.