ADVERTISEMENT

ಮತ್ತೆ ಖಾಕಿಧಾರಿಯಾಗಿ ಪ್ರಿಯಾಂಕ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 9 ಮೇ 2020, 8:59 IST
Last Updated 9 ಮೇ 2020, 8:59 IST
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ   

‘ಸೆಕೆಂಡ್ ಹಾಫ್’ ಚಿತ್ರದಲ್ಲಿ ಕಾನ್‌ಸ್ಟೆಬಲ್‌ ಆಗಿ ಖಾಕಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’ ಚಿತ್ರದಲ್ಲಿ ಬಡ್ತಿ ಪಡೆದಿದ್ದಾರೆ. ಇದರಲ್ಲಿ ಖಡಕ್‌ ಇನ್‌ಸ್ಪೆಕ್ಟರ್‌ ಶ್ರೀದುರ್ಗಿ ಪಾತ್ರ ಅವರದು. ಯಾವುದೇ ಡ್ಯೂಪ್‌ ಇಲ್ಲದೇ ನೈಜವಾಗಿ ಪೈಟ್‌ ಮಾಡಿದ್ದಾರಂತೆ ಇದರಲ್ಲಿ ಪ್ರಿಯಾಂಕ ಅವರು.

ಈ ಚಿತ್ರಕ್ಕೆ ಗುರುಮೂರ್ತಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ– ಚಿತ್ರಕಥೆ ಇವರದ್ದೇ. ಇದು ಇವರ ಮೊದಲ ಚಿತ್ರ. ನಿರ್ದೇಶಕ ಗುಣಕುಮಾರ್‌ ಅವರ ಗರಡಿಯಲ್ಲಿ ಪಳಗಿದ ಅನುಭವಿ ಇವರು. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನ ಟೊಪ್ಪಿ ಧರಿಸುತ್ತಿದ್ದಾರೆ.

ಶೇ 30ರಷ್ಟು ಚಿತ್ರೀಕರಣ ನಡೆದಿದೆ. ಬೆಂಗಳೂರು, ನೆಲಮಂಗಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಕೆಲವು ಫೈಟ್‌ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಾಹಸ ದೃಶ್ಯಗಳು ನೈಜವಾಗಿರಬೇಕೆಂದು ಪ್ರಿಯಾಂಕ ಅವರು ಡ್ಯೂಪ್‌ ಬಳಸದೆ ಖಳನಟರೊಂದಿಗೆ ಹೊಡೆದಾಟ ನಡೆಸಿದ್ದಾರಂತೆ. ಇದಕ್ಕಾಗಿ ಅವರು ಫೈಟ್‌ ಮಾಸ್ಟರ್‌ ರವಿ ಅವರಿಂದ ವಿಶೇಷ ತರಬೇತಿಯನ್ನೂ ಪಡೆದುಕೊಂಡಿದ್ದರಂತೆ. ಲಾಕ್‍ಡೌನ್‌ ತೆರೆವಾದ ತಕ್ಷಣ ಮುಂದಿನ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ, ಮಡಿಕೇರಿ, ತೀರ್ಥಹಳ್ಳಿ ಭಾಗದಲ್ಲಿ ಪುನಾ ಆರಂಭಿಸುವುದು ಚಿತ್ರತಂಡದ ಯೋಜನೆ.

ADVERTISEMENT

ಇದೊಂದು ಮರ್ಡರ್‌ ಮಿಸ್ಟರಿ ಕಥೆ. ಒಂದು ಅತ್ಯಾಚಾರ ನಡೆದಿರುತ್ತದೆ. ಈ ಪ್ರಕರಣದ ತನಿಖೆಯ ಬೆನ್ನತ್ತಿ ಇನ್‌ಸ್ಪೆಕ್ಟರ್‌ ಶ್ರೀದುರ್ಗಿ ಹೊರಟಾಗ ಒಂದೇ ಒಂದೇ ಘಟನೆಗಳು ತೆರೆದುಕೊಳ್ಳುತ್ತವೆ. ನಾಲ್ಕು ಫೈಟ್‌ಗಳಿವೆ. ಅನಿವಾರ್ಯ ಸಂದರ್ಭ ಎದುರಾದರೆ ಹೆಣ್ಣು ಕೂಡ ‘ಉಗ್ರಾವತಾರ’ ತಳೆಯುತ್ತಾಳೆ ಎನ್ನುವುದು ಈ ಚಿತ್ರದ ಕಥಾಹಂದರ. ಸ್ತ್ರೀಯನ್ನು ಹೇಗೆ ಗೌರವಿಸಬೇಕೆನ್ನುವ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ ಎನ್ನುತ್ತಾರೆ ಗುರುಮೂರ್ತಿ.

ನವ ನಟಿ ಹಾಸನದ ನಿಸರ್ಗ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಎಂಎಲ್‌ಎ ಪಾತ್ರಕ್ಕಾಗಿ ನಾಜಿರ್ ಅಥವಾ ಆಶಿಷ್‍ ವಿದ್ಯಾರ್ಥಿ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಕಮಿಷನರ್‌ ಪಾತ್ರದಲ್ಲಿ ಜಾಕಿಶ್ರಾಫ್ ಕಾಣಿಸಿಕೊಳ್ಳಲಿದ್ದಾರೆ.

ಎಂ.ಕೆ. ಪಿಕ್ಚರ್ಸ್‌ ಬ್ಯಾನರ್‌ ಅಡಿ ಚಿಕ್ಕಬಳ್ಳಾಪುರದ ಮುನಿಕೃಷ್ಣ ಬಂಡವಾಳ ಹೂಡುತ್ತಿದ್ದಾರೆ. ಕಿನ್ನಾಳ್‍ ರಾಜ್ ಸಂಭಾಷಣೆ ಜತೆಗೆ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ರವಿ ಬಸ್ರೂರು ಸೋದರ ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ನಂದಕುಮಾರ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.