ADVERTISEMENT

ಸಿನಿಮಾ ನಿರ್ಮಾಣಕ್ಕಿಳಿದ ನಟ ಯಶ್‌ ತಾಯಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 1:03 IST
Last Updated 2 ಮೇ 2025, 1:03 IST
ಪೃಥ್ವಿ ಅಂಬಾರ್‌ 
ಪೃಥ್ವಿ ಅಂಬಾರ್‌    

ನಟ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ಇದೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರ ಪಿಎ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದಲ್ಲಿ ನಾಯಕನಾಗಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ನಟಿಸುತ್ತಿದ್ದಾರೆ. 

ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್‌ ಹಾಗೂ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ ಶ್ರೀರಾಜ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಶ್ರೀರಾಜ್‌, ನಿರ್ದೇಶಕರಾದ ಕೆ.ವಿ. ರಾಜು, ರವಿ ಶ್ರೀವತ್ಸ ಅವರ ಬಳಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದ ಅನುಭವಿ ತಾರಾಬಳಗ ಚಿತ್ರದಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ. ಪೃಥ್ವಿ ಅಂಬಾರ್‌ ಈ ಸಿನಿಮಾದಲ್ಲಿ ಮಾಸ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಚಿತ್ರತಂಡದಲ್ಲಿ ಹೊಸಬರೇ ಇದ್ದು, ಹಿನ್ನೆಲೆ ಸಂಗೀತ ನೀಡಲಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಯುವ ಪ್ರತಿಭೆಗಳೇ. ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಪೃಥ್ವಿ ಆ್ಯಕ್ಷನ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ತಿಕ್ ಎಸ್. ಛಾಯಾಚಿತ್ರಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ ಹಾಗೂ ಗೌಸ್ ಪಿರ್ ಸಾಹಿತ್ಯ ‘ಕೊತ್ತಲವಾಡಿ’ ಸಿನಿಮಾಗೆ ಇದೆ.

ADVERTISEMENT
ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.