ADVERTISEMENT

ಅಳುವ ಕಡಲೊಳು ತೇಲಿಬಂದ ‘ಪುನೀತ’ ಧ್ಯಾನ...

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 21:15 IST
Last Updated 30 ಅಕ್ಟೋಬರ್ 2021, 21:15 IST
ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ಶನಿವಾರ ಅಂತಿಮ ನಮನ ಸಲ್ಲಿಸಿದ ಪುತ್ರಿ ಧೃತಿ ಅವರನ್ನು ದೊಡ್ಡಪ್ಪ ಶಿವರಾಜ್‌ ಕುಮಾರ್‌ ಸಂತೈಸಿದರು. ಪುನೀತ್‌ ಅವರ ಪತ್ನಿ ಅಶ್ವಿನಿ ಮತ್ತು ಕಿರಿಯ ಪುತ್ರಿ ವಂದಿತಾ ಇದ್ದಾರೆ ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.
ಪುನೀತ್‌ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ಶನಿವಾರ ಅಂತಿಮ ನಮನ ಸಲ್ಲಿಸಿದ ಪುತ್ರಿ ಧೃತಿ ಅವರನ್ನು ದೊಡ್ಡಪ್ಪ ಶಿವರಾಜ್‌ ಕುಮಾರ್‌ ಸಂತೈಸಿದರು. ಪುನೀತ್‌ ಅವರ ಪತ್ನಿ ಅಶ್ವಿನಿ ಮತ್ತು ಕಿರಿಯ ಪುತ್ರಿ ವಂದಿತಾ ಇದ್ದಾರೆ ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.   

ಬೆಂಗಳೂರು: ಮನೆಯ ಸದಸ್ಯನನ್ನೇ ಕಳೆದುಕೊಂಡ ಅನಾಥ ಭಾವ, ನೆಚ್ಚಿನ ‘ಅಪ್ಪು’ವನ್ನು ಹೇಗಾದರೂ ಕಾಣಲೇಬೇಕೆಂಬ ತಹತಹ, ಮುಗಿಲು ಮುಟ್ಟಿದ ಅಪ್ಪು... ಅಪ್ಪು... ಎಂಬ ಮಾರ್ಮೊರೆತದ ಅನುರಣನ. . .

ಇದು ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಕಂಡು ಬಂದ ಮನಕಲಕುವ ಭಾವನೋಟ. ಪುನೀತ್‌ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾಜ್ಯದ ದಶದಿಕ್ಕುಗಳಿಂದ ಅಭಿಮಾನದ ನದಿಗಳೇ ನುಗ್ಗಿಬಂದಂತೆ ಭಾಸವಾಗುವಂತಿತ್ತು. ಕುಟುಂಬವೇ ಕುಳಿತು ನೋಡಲೇಬೇಕಾದ ಸಿನಿಮಾಗಳನ್ನು ಕೊಟ್ಟ ಪುನೀತ್‌ ನೋಡಲು ಕಣ್ಣೀರಿಳಿಸಿಕೊಳ್ಳುತ್ತಲೇ ಮಕ್ಕಳು ಮರಿಗಳನ್ನು ಕಟ್ಟಿಕೊಂಡ ಜನಕ್ರೀಡಾಂಗಣದತ್ತ ದೌಡಾಯಿಸಿದ್ದರು. ಅಳುವ ಕಡಲಿನಲಿ ತೇಲಿಬಂದ
ಪುನೀತ ಧ್ಯಾನ ಆವರಣವನ್ನೇ ತುಂಬಿತ್ತು.

ಬೆಳಿಗ್ಗೆಯಿಂದಲೂ ಮೌನಕ್ಕೆ ಜಾರಿದ್ದ ಪುನೀತ್ ಅವರ ಪತ್ನಿ ಅಶ್ವಿನಿ,ಕಿರಿಯ ಪುತ್ರಿ ವಂದಿತಾರನ್ನು ಸಂತೈಸುತ್ತಲೇ ಉಮ್ಮಳಿಸಿ ಬಂದ ದುಃಖವನ್ನು ತಡೆಯಲಾಗದೆ ಕಣ್ಣೀರು ಹಾಕುತ್ತಲೇ ಇದ್ದರು. ಸಹೋದರ ಶಿವರಾಜ್‌ ಕುಮಾರ್ ಅವರುಗಾಜಿನ ಪೆಟ್ಟಿಗೆಗೆ ತಲೆಯೊಡ್ಡಿ, ಬಿಕ್ಕಿ ಬಿಕ್ಕಿ ಅತ್ತರು.

ADVERTISEMENT

ಕನ್ನಡ ಚಿತ್ರರಂಗದ ಪ್ರಮುಖರ ಜೊತೆಗೆ ನಂದಮೂರಿ ಬಾಲಕೃಷ್ಣ, ಜ್ಯೂನಿಯರ್ ಎನ್‌.ಟಿ.ಆರ್, ಚಿರಂಜೀವಿ, ಪ್ರಭುದೇವ್, ವಿಕ್ಟರಿ ವೆಂಕಟೇಶ್, ಹಾಸ್ಯನಟ ಅಲಿ, ಶ್ರೀಕಾಂತ್, ಅರ್ಜುನ್‌ ಸರ್ಜಾ ಸೇರಿದಂತೆ ತೆಲುಗು–ತಮಿಳಿನ ನಟರೂ ವಿದಾಯದ ಗಳಿಗೆಗೆ ಸಾಕ್ಷಿಯಾದರು.

ಸಂಜೆ 6 ಗಂಟೆಗೆ ಕಂಠೀರವ ಕ್ರೀಡಾಂಗಣ ತಲುಪಿದ‍ ಹಿರಿಯ ಪುತ್ರಿ ಧೃತಿ, ಚಿರನಿದ್ರೆಗೆ ಜಾರಿದ್ದ ಅಪ್ಪನನ್ನು ಕಂಡು, ಮೂಕರಾದರು. ಅಮ್ಮನನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಿದ್ದರೇ, ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರು ಮಗಳನ್ನು ಸಂತೈಸುವ ಯತ್ನ ಮಾಡಿದರು.

ಅಭಿಮಾನದ ಮಳೆ:ಅಭಿಮಾನಿಗಳ ಹೃದಯಕ್ಕೆ ಕತ್ತಲು ಕವಿದಂತೆ ಬಾನಂಗಳದಲ್ಲೂ ಬೆಳಿಗ್ಗೆಯೇ ಮೋಡ ಆವರಿಸಿತ್ತು. ‘ಯುವರತ್ನ’ನ ಅಗಲುವಿಕೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅಲ್ಲಿದ್ದವರಿಗೆ ಇರಲಿಲ್ಲ. ಕೊನೆ ನಮಸ್ಕಾರ ಹಾಕಿ ಹೊರಬರುತ್ತಿದ್ದಂತೆಯೇ ಕಣ್ಣೀರ ಕಟ್ಟೆ ಒಡೆದು, ಬ್ಯಾರಿಕೇಡ್‌ಗೆ ತಲೆ ಚಚ್ಚಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿತ್ತು.

ಮಧ್ಯಾಹ್ನ ಸೂರ್ಯನೂ ಮರೆಯಾದರೇ, ಅಭಿಮಾನಿಗಳ ಅಭಿಮಾನಕ್ಕೆ ಆಗಸವೂ ಮರುಗಿದಂತಿತ್ತು. ಮಳೆಯ ಜೊತೆಗೆ ನೆರೆದಿದ್ದ ಜನರ ಕಣ್ಣ ಹನಿಗಳಿಂದಕಂಠೀರವ ಕ್ರೀಡಾಂಗಣದ ಹುಲ್ಲುಗಾವಲಿನ ಒಂದೊಂದು ಹಸಿರುಗರಿಯ ಅಂಚೂ ಸಾವಿಗೆ ಮಿಡಿಯಲಿಕ್ಕೆಂಬಂತೆ ಒದ್ದೆಯಾಗಿದ್ದವು.

ಕ್ರೀಡಾಂಗಣವೇ ತುಂಬಿಕೊಂಡ ಜೈಕಾರದ ಜೊತೆಗೇ ಮೃತದೇಹ ಕಂಡು, ‘ಅಪ್ಪು... ನಮ್ಮನ್ನು ಬಿಟ್ಟು ಹೋದೆಯಲ್ಲಾ... ಅಪ್ಪು... ಎಂಬ ರೋದನವೂ ಕೇಳಿಸುತ್ತಲೇಇತ್ತು. .

ಪುನೀತ್‌ ಅಂತ್ಯಕ್ರಿಯೆ ಇಂದು

ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ. ರಾಜ್‌ ಸ್ಮಾರಕದ ಬಳಿ ಪುನೀತ್‌ ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆಯೇ ನಡೆಯಲಿದೆ. ಪುನೀತ್‌ ಮಗಳು ಧೃತಿ ಶನಿವಾರ ಸಂಜೆಯೇ ನಗರಕ್ಕೆ ಬರುವುದು ಖಚಿತವಾಗಿದ್ದರಿಂದ ಆ ಬಳಿಕ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಮುಂದೂಡಲಾಯಿತು. ಪುನೀತ್‌ ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಅಂತ್ಯಕ್ರಿಯೆ ವೇಳೆ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.