ADVERTISEMENT

ಪೈರಸಿ ತಡೆಯಲು ಮೊದಲು ನಾವು ಬದಲಾಗಬೇಕು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 16:17 IST
Last Updated 10 ಮಾರ್ಚ್ 2021, 16:17 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌   

ಬೆಂಗಳೂರು: ಕೋವಿಡ್‌ ಕಾರಣದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಚಿತ್ರೋದ್ಯಮಕ್ಕೆ ಪೈರಸಿ ಕಾಟ ಆರಂಭವಾಗಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಹೀರೋ ಚಿತ್ರವು ಪೈರಸಿಯಾಗಿದ್ದು, ಇದನ್ನು ತಡೆಯಲು ನಟ ರಿಷಬ್‌ ಶೆಟ್ಟಿ ಮನವಿ ಮಾಡಿದ್ದರು. ಇದೀಗ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದಾರೆ.

‘ತಂತ್ರಜ್ಞಾನದ ವಿರುದ್ಧ ಹೋರಾಡುವುದು ತುಂಬಾ ಕಷ್ಟ. ಪೈರಸಿ ನಿಲ್ಲಿಸಲು ಮೊದಲು ನಾವು ಬದಲಾಗಬೇಕು. ಈ ವಿಷಯದಲ್ಲಿ ನಾವು ಬದಲಾಗುವುದು ಬಹಳ ಮುಖ್ಯ. ಅಭಿಮಾನಿಗಳಲ್ಲಿ, ಸಿನಿಮಾ ಪ್ರೇಕ್ಷಕರಲ್ಲಿ ಕೇಳಿಕೊಳ್ಳುವುದು ಏನೆಂದರೆಬರುವ ಎಲ್ಲ ಸಿನಿಮಾ ಪ್ರದರ್ಶನದ ವೇಳೆ ಪೈರಸಿ ನಿಮಗೆಲ್ಲಾದರೂ ಕಂಡುಬಂದರೆ, ನೀವೇ ಅದನ್ನು ತಡೆಯಿರಿ. ಸಿನಿಮಾದ ಪೈರಸಿ ಕಾಪಿಗಳು ಸಿಕ್ಕಿದರೂ ಅದನ್ನು ನೋಡಬೇಡಿ. ಚಿತ್ರಮಂದಿರಕ್ಕೇ ಬಂದು ಚಿತ್ರವನ್ನು ನೋಡಿ. ನಾವು ಬದಲಾಗದೇ ಇದ್ದರೆ ತಂತ್ರಜ್ಞಾನವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಎಷ್ಟೇ ಕಷ್ಟಪಟ್ಟರೂ ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಸೈಬರ್‌ ಕ್ರೈಂ ಎಷ್ಟೇ ಬಲವಾಗಿದ್ದರೂ ಪೈರಸಿಯನ್ನು ತಡೆಯಲು ಮೊದಲು ನಾವು ಬದಲಾಗಬೇಕು. ತಂತ್ರಜ್ಞಾನ ಬಹಳ ಬದಲಾಗಿದೆ. ಮೊಬೈಲ್ ಕ್ಯಾಮೆರಾದಲ್ಲೂ ವಿಡಿಯೊ ಮಾಡುತ್ತಾರೆ. ಸಿನಿಮಾಗಳಿಗೆ ಚಿತ್ರಮಂದಿರವೆಂಬ ವೇದಿಕೆ ಇದೆ. ಅಲ್ಲಿಗೇ ಹೋಗಿ ಪ್ರೇಕ್ಷಕರು ಚಿತ್ರಗಳನ್ನು ನೋಡಿ’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.