ADVERTISEMENT

‘ಯುವರತ್ನ’ನ ‘ಅಪ್ಪು’ ಕ್ಯಾರೆಕ್ಟರ್‌!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 11:49 IST
Last Updated 7 ಮಾರ್ಚ್ 2020, 11:49 IST
ಪುನೀತ್‌ ರಾಜ್‌ಕುಮಾರ್
ಪುನೀತ್‌ ರಾಜ್‌ಕುಮಾರ್   

‘ಅಪ್ಪು’ –ನಟ ಪುನೀತ್‌ ರಾಜ್‌ಕುಮಾರ್‌ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ. ತೆರೆಯ ಮೇಲೆ ರಕ್ಷಿತಾ ಮತ್ತು ಪುನೀತ್‌ ಕೆಮಿಸ್ಟ್ರಿ ಸೊಗಸಾಗಿತ್ತು. ಯುವಜನರಿಗೆ ಮೋಡಿ ಮಾಡಿದ್ದ ಪುರಿ ಜಗನ್ನಾಥ್‌ ನಿರ್ದೇಶನದ ಈ ಸಿನಿಮಾ ತೆರೆಕಂಡ ಹದಿನೆಂಟು ವರ್ಷಗಳು ಸಂದಿವೆ. ಮತ್ತೆ ‘ಪವರ್‌ ಸ್ಟಾರ್‌’ ಇಂತಹ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದರು.

ಈ ಪ್ರಶ್ನೆಗೆ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಉತ್ತರ ಸಿಕ್ಕಿದೆ. ‘ಅಪ್ಪು’ ಚಿತ್ರದ ಬಳಿಕ ಪುನೀತ್‌ ಅವರನ್ನು ಮತ್ತೆ ಅಂತಹದ್ದೇ ಪಾತ್ರದಲ್ಲಿ ನೋಡುವ ಅವಕಾಶ ಈ ಸಿನಿಮಾದ ಮೂಲಕ ಅವರ ಅಭಿಮಾನಿಗಳಿಗೆ ದಕ್ಕಲಿದೆಯಂತೆ.

ನಟ, ನಟಿಯರ ಹುಟ್ಟುಹಬ್ಬವಿದ್ದಾಗ ಅವರು ನಟಿಸುತ್ತಿರುವ ಸಿನಿಮಾಗಳ ಫಸ್ಟ್‌ಲುಕ್‌, ಹಾಡು, ಟೀಸರ್‌, ಟ್ರೇಲರ್‌ ಬಿಡುಗಡೆ ಮಾಡುವುದು ಪ್ರೊಡಕ್ಷನ್‌ ಹೌಸ್‌ಗಳ ಸಂಪ್ರದಾಯ. ಮಾರ್ಚ್‌ 17 ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಅಂದು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀ‌ಡಲು ‘ಯುವರತ್ನ’ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್‌ ನಿರ್ಧರಿಸಿದೆ. ಈ ಕುರಿತು ಹೊಂಬಾಳೆಯ ಸೃಜನಶೀಲ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈಗಾಗಲೇ, ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಎರಡು ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿಯಿದೆ. ಯುರೋಪ್‌ನಲ್ಲಿ ನಾಯಕ ಮತ್ತು ನಾಯಕಿಯ ಒಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ, ‘ಕೋವಿಡ್‌ 19’ ಸೋಂಕಿನ ಹಿನ್ನೆಲೆಯಲ್ಲಿ ಶೂಟಿಂಗ್‌ ಮುಂದೂಡಲಾಗಿದೆ. ಬೆಂಗಳೂರಿನಲ್ಲಿಯೇ ನಾಯಕನ ಇಂಟ್ರಡಕ್ಷನ್‌ ಸಾಂಗ್‌ನ ಶೂಟಿಂಗ್‌ಗೆ ನಿರ್ಧರಿಸಲಾಗಿದೆ.

ಪ್ರಸ್ತುತ ಶೈಕ್ಷಣಿಕ ರಂಗ ವ್ಯಾಪಾರೀಕರಣಗೊಂಡಿದೆ. ಈ ದಂಧೆಯ ಸುತ್ತವೇ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಇದರಲ್ಲಿ ಆ್ಯಂಟನಿ ಜೋಸೆಫ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಮಿಳಿನ ಶಯೇಷಾ ಇದರ ನಾಯಕಿ.

ಎಸ್. ತಮನ್‌ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವೆಂಕಟೇಶ್‌ ಅಂಗುರಾಜ್‌ ಅವರದು. ವಿಜಯ್‌ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಪ್ರಕಾಶ್ ರಾಜ್‌, ವಸಿಷ್ಠ ಸಿಂಹ, ದಿಗಂತ್‌, ಸೋನು ಗೌಡ ತಾರಾಗಣದಲ್ಲಿದ್ದಾರೆ. ಬೇಸಿಗೆ ರಜೆ ವೇಳೆಗೆ ಥಿಯೇಟರ್‌ಗೆ ‘ಯುವರತ್ನ’ನ ಆಗಮನವಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.