ADVERTISEMENT

ಪುರ್‌ಸೊತ್‌ರಾಮನ ಹಾಸ್ಯಪುರಾಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 19:30 IST
Last Updated 30 ಜನವರಿ 2020, 19:30 IST
ರವಿಶಂಕರ್ ಗೌಡ
ರವಿಶಂಕರ್ ಗೌಡ   

ಕಡಿಮೆ ಸಂಬಳಕ್ಕೆ ಏಕೆ ದುಡಿಯಬೇಕೆಂಬ ಮನಸ್ಥಿತಿಯಮೂವರು ಸ್ನೇಹಿತರು, ಬದುಕಿನ ಬಗ್ಗೆ ನಕರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಾ ಅಮೂಲ್ಯ ಸಮಯ ಹರಣ ಮಾಡುತ್ತಿರುತ್ತಾರೆ. ಪುರುಸೊತ್ತಾಗಿರುವ ಇವರ ಬದುಕಿನಲ್ಲಿ ಏನೆಲ್ಲಾ ಸಂಭವಿಸಲಿದೆ ಎನ್ನುವುದನ್ನು ನಿರ್ದೇಶಕ ಸರು ಹಾಸ್ಯಮಯವಾಗಿ ‘ಪುರ್‌ಸೋತ್‌ರಾಮ’ ಚಿತ್ರದಲ್ಲಿ ತೋರಿಸಿದ್ದಾರಂತೆ.

ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಸಿದರು.

ನಟ ಮನುರಂಜನ್‌, ಟ್ರೇಲರ್‌ ನೋಡಿದರೆ ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವೆಂದು ನಿರ್ಧರಿಸಬಹುದು. ಚಿತ್ರ ಯಶಸ್ವಿಯಾಗಲಿ ಎಂದರು.

ADVERTISEMENT

28 ದಿನಗಳ ಚಿತ್ರೀಕರಣ ಮಾಡಿದ್ದು, ಶೂಟಿಂಗ್‌ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಫೆಬ್ರುವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು ನಿರ್ದೇಶಕ ಸರು. ಈ ಚಿತ್ರದಲ್ಲಿ ಅವರು ನಟನೆಯನ್ನೂ ಮಾಡಿದ್ದಾರೆ.

ನಿರ್ಮಾಪಕಿ ಮತ್ತು ನಾಯಕಿ ಮಾನಸ, ‘ರಾಜಕೀಯ ಪಕ್ಷದಲ್ಲಿದ್ದ ನಾನು ಸಿನಿಮಾ ರಂಗಕ್ಕೆ ಬಂದಿದ್ದುಆಕಸ್ಮಿಕ. ಒಂದು ವರ್ಷದಲ್ಲಿ ಚಿತ್ರರಂಗ ತುಂಬಾ ಕಲಿಸಿದೆ. ಅಂತರಂಗದಲ್ಲೂ ನಾವು ಎಷ್ಟೊಂದು ಬಲಿಷ್ಠವಾಗಿರಬೇಕು ಎನ್ನುವುದನ್ನು ಮನದಟ್ಟು ಮಾಡಿಸಿದೆ. ಆಶೀರ್ವಾದ ಬೇಡಿ ದೊಡ್ಮನೆ ಕುಟುಂಬದ ರಾಘಣ್ಣನ ಮನೆಗೆ ಹೋದಾಗ ತುಂಬು ಹೃದಯದಿಂದ ಆಶೀರ್ವದಿಸಿದರು. ಅವರ ಮಾತು, ಸಲಹೆ ಸಾಕಷ್ಟು ಪ್ರೇರಣೆಯನ್ನು ನೀಡಿದೆ’ ಎಂದರು.

ನಟ ರವಿಶಂಕರ್‌ ಗೌಡ, ಮನೆಯ ಜವಾಬ್ದಾರಿ ಮರೆತು, ಎಲ್ಲವನ್ನೂ ಅಪ್ಪನ ಹೆಗಲಿಗೆ ವಹಿಸಿ ಬೇಜವಾಬ್ದಾರಿಯಿಂದ ಕಾಲಕಳೆಯುವ ಮಗನ ಪಾತ್ರ ನನ್ನದು. ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತಿರುವ ಪಾತ್ರವದು. ಸಮಾಜಕ್ಕೆ ಹೇಳಬೇಕಾದ ಸಂದೇಶವನ್ನು ನಿರ್ದೇಶಕ ಹಾಸ್ಯದ ಮೂಲಕ ಹೇಳಿದ್ದಾರೆ ಎಂದರು.

ರವಿಶಂಕರ್‌ ಜತೆಗೆ ನಟಿಸುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇವೆ. ಕ್ಲೈಮ್ಯಾಕ್ಸ್‌ ತುಂಬಾ ಚೆನ್ನಾಗಿದೆ ಎನ್ನುವ ಮಾತು ಸೇರಿಸಿದರುಹಾಸ್ಯ ನಟ ಶಿವರಾಜ್‌ ಕೆ.ಆರ್‌.ಪೇಟೆ.

ಹಿರಿಯ ನಟ ಬ್ಯಾಂಕ್‌ ಜನಾರ್ದನ್‌, ಬೇಜವಾಬ್ದಾರಿ ಮಗನ ತಂದೆಯ ಪಾತ್ರ ನಿಭಾಯಿಸಿದ್ದೇನೆ. ಮಗನನ್ನು ಸರಿದಾರಿಗೆ ತರಲು ಹೆಣಗುವ ಪಾತ್ರ ನನ್ನದು. ಮೂವರು ಯುವಕರೊಂದಿಗೆ ನಾನು ಯುವಕನಾಗಿ ನಟಿಸಿದ್ದೇನೆ ಎಂದರು.

ತಾರಾಗಣದಲ್ಲಿ ಕುರಿ ಪ್ರತಾಪ್, ಸಹನಾ, ಅನುಷಾ ಪಕಾಲಿ, ಆರ್.ಟಿ. ರಮಾ ಇದ್ದಾರೆ.ಕಿರಣ್ ಕುಮಾರ್ ಛಾಯಾಗ್ರಹಣ ಅವರದ್ದು. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸುದ್ದೋರಾಯ್ ಸಂಗೀತ ನೀಡಿದ್ದಾರೆ.ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಪ್ರಭುದೇವ್ ಅವರದ್ದು.ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ರಾಜ್‌ಕಿಶೋರ್, ಮದನ್ - ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.