ADVERTISEMENT

ಪಿವಿಆರ್‌ ಕಂಪನಿಯ ಹೊಸ ಸೂತ್ರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 19:30 IST
Last Updated 6 ಏಪ್ರಿಲ್ 2020, 19:30 IST
ಸಿನಿಮಾ ಮಂದಿರದಲ್ಲಿ ‘ನಡುವೆ ಅಂತರವಿರಲಿ’ ಸೂತ್ರ ಜಾರಿಯಾಗಲಿದೆ. (ಸಾಂದರ್ಭಿಕ ಚಿತ್ರ)
ಸಿನಿಮಾ ಮಂದಿರದಲ್ಲಿ ‘ನಡುವೆ ಅಂತರವಿರಲಿ’ ಸೂತ್ರ ಜಾರಿಯಾಗಲಿದೆ. (ಸಾಂದರ್ಭಿಕ ಚಿತ್ರ)   

ಭಾರತದಲ್ಲಿ ಅತಿಹೆಚ್ಚು ಚಿತ್ರಮಂದಿರಗಳನ್ನು ಹೊಂದಿರುವ ಕಂಪನಿ ಪಿವಿಆರ್. ಈ ಕಂಪನಿಯು ಈಗ ತನ್ನ ಮಾಲೀಕತ್ವದ ಸಿನಿಮಾ ಮಂದಿರಗಳಲ್ಲಿ ಆಸನಗಳ ನಡುವಿನ ಅಂತರ ಹೆಚ್ಚಿಸುವ ಆಲೋಚನೆಯಲ್ಲಿದೆ. ಇದಕ್ಕೆ ಕಾರಣ ಕೊರೊನಾ ಸೋಂಕಿನ ಭೀತಿ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ.

‘ಟಿಕೆಟ್ ಬುಕ್ ಮಾಡುವ ಸ್ಥಳದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಅಕ್ಕಪಕ್ಕದ ಆಸನಗಳಲ್ಲಿ ಕುಳಿತವರು ಸಿನಿಮಾ ವೀಕ್ಷಿಸುತ್ತ ಒಟ್ಟಾಗಿ ಪಾಪ್‌ಕಾರ್ನ್‌ ಮೆಲ್ಲುವುದು ಸಾಧ್ಯವಾಗದಂತೆ ಮಾಡಲಾಗುವುದು. ಎಲ್ಲಾ ಚಿತ್ರಮಂದಿರಗಳನ್ನು ಸ್ಯಾನಿಟೈಸ್ ಮಾಡಿ, ತನ್ನ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವುದು ನಾವು ಕೈಗೊಳ್ಳಲಿರುವ ಕ್ರಮಗಳಾಗಿವೆ’ ಎಂದು ಹೇಳುತ್ತಾರೆ ಪಿವಿಆರ್‌ ಸಿನಿಮಾಸ್ ಕಂಪನಿಯ ಸಿಇಒ ಗೌತಮ್ ದತ್ತ.

‘ಈ ಕ್ರಮಗಳನ್ನು ನಾವು ಎರಡು ವಾರ ಅಥವಾ ಒಂದು ತಿಂಗಳ ಅವಧಿವರೆಗೆ ಜಾರಿಯಲ್ಲಿ ಇಡಲಿದ್ದೇವೆ. ಆಗ ಜನರಿಗೆ ತಾವು ಸುರಕ್ಷಿತ ಎಂಬ ಭಾವನೆ ಮೂಡುತ್ತದೆ. ವೀಕ್ಷಕರ ವಿಶ್ವಾಸಗಳಿಸಲು, ಅತ್ಯಂತ ಸುರಕ್ಷಿತವಾಗಿ ಸಿನಿಮಾ ವೀಕ್ಷಿಸಬಹುದು ಎಂಬ ಭಾವನೆ ಅವರಲ್ಲಿ ಮೂಡಿಸಲು ಹಲವು ಕ್ರಮಗಳ ಜಾರಿಗೆ ಮುಂದಾಗಿದ್ದೇವೆ’ ಎಂದು ಹೇಳುತ್ತಾರೆ.

ADVERTISEMENT

1997ರಲ್ಲಿ ಆರಂಭವಾದ ಪಿವಿಆರ್ ಸಿನಿಮಾಸ್ ಕಂಪನಿಯು ಈಗ ದೇಶದಾದ್ಯಂತ ಒಟ್ಟು 841 ಚಿತ್ರಪರದೆಗಳನ್ನು ಹೊಂದಿದೆ. ಈ ಕಂಪನಿಯು ಆದಾಯವೇ ಇಲ್ಲದ ಸ್ಥಿತಿ ತಲುಪಿರುವುದು ಇದೇ ಮೊದಲು. ‘ಇತರೇ ಉದ್ಯಮಗಳಂತೆಯೇ ನಾವೂ ಏರಿಳಿತಗಳನ್ನು ಕಂಡಿದ್ದೇವೆ. ಆದರೆ, ನಮ್ಮ 21 ವರ್ಷಗಳ ಪಯಣದಲ್ಲಿ ಆದಾಯ ಸಂಪೂರ್ಣ ನಿಂತುಹೋದ ಸ್ಥಿತಿ ಯಾವತ್ತೂ ಎದುರಾಗಿರಲಿಲ್ಲ’ ಎಂಬುದು ಅವರ ವಿವರಣೆ.

‘ಒಟಿಟಿ ವೇದಿಕೆಗಳ ಕಾರಣದಿಂದ ಸಿನಿಮಾ ಮಂದಿರಗಳಿಗೆ ಜನ ಬರುವುದು ಕಡಿಮೆ ಆಗುವುದಿಲ್ಲ. ಬದಲಿಗೆ, ಚಿತ್ರಮಂದಿರಗಳು ಜನರನ್ನು ಆಕರ್ಷಿಸುವುದು ನಿರಂತರವಾಗಿ ಇರಲಿದೆ’ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.