ADVERTISEMENT

ನಟಿ ರಚಿತಾ ರಾಮ್‌ ಡಾಕ್ಟರ್‌ ಆಗಿದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 12:48 IST
Last Updated 17 ಸೆಪ್ಟೆಂಬರ್ 2020, 12:48 IST
ರಚಿತಾ ರಾಮ್
ರಚಿತಾ ರಾಮ್   

‘ಡಿಂಪಲ್ ಕ್ವೀನ್’ ರಚಿತಾ ರಾಮ್‌ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆಯ ಕೈಯಲ್ಲಿರುವ ಸಿನಿಮಾಗಳೇ ಇದಕ್ಕೆ ಸಾಕ್ಷಿ. ‘ಬುಲ್‌ ಬುಲ್‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಚ್ಚು ನಿರ್ಮಾಪಕರ ಪಾಲಿನ ಅದೃಷ್ಟದ ನಟಿ. ಆಕೆ ನಟಿಸಿರುವ ಬಹುತೇಕ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿರುವುದೇ ಇದಕ್ಕೆ ನಿದರ್ಶನ.

ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದಲ್ಲಿ ನಟಿಸುವ ಮೂಲಕ ರಚಿತಾ ಸ್ಟಾರ್‌ ನಟರ ಜೊತೆಗಷ್ಟೇ ನಟಿಸುತ್ತಾರೆ ಎಂಬ ಹಣೆಪಟ್ಟಿಯಿಂದಲೂ ಹೊರಬಂದಿದ್ದಾರೆ. ಗಟ್ಟಿಯಾದ ಕಥೆ ಇದ್ದರೆ ಹೊಸ ನಿರ್ದೇಶಕರು, ನಟರ ಜೊತೆಗೂ ನಾನು ನಟಿಸಲು ಸದಾ ಸಿದ್ಧ ಎಂದಿದ್ದಾರೆ.

ಪ್ರಸ್ತುತ ರಚ್ಚು ನಟನೆಯ ‘ಲಿಲ್ಲಿ’ ಚಿತ್ರದ ಶೂಟಿಂಗ್‌ ಆರಂಭಗೊಂಡಿದೆ. ‘ನೀರ್‌ ದೋಸೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿಜಯ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು. ಅನಿಮೇಷನ್‌ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಪರಿಣತಿ ಇದೆಯಂತೆ. ಹಾಗಾಗಿಯೇ, ಹಾಲಿವುಡ್‌ ಗುಣಮಟ್ಟದಲ್ಲಿ ‘ಲಿಲ್ಲಿ’ಯನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ADVERTISEMENT

ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ಆಯುಷ್ಮಾನ್‌ಭವ’ ಚಿತ್ರದಲ್ಲಿ ರಚಿತಾ ರಾಮ್ ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಲಿಲ್ಲಿ’ಯಲ್ಲಿ ಅವರು ಮನೊವೈದ್ಯೆಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಡಾ.ಮಾಹಿ’. ಸವಾಲಿನ ಪಾತ್ರದ ಜೊತಗೆ ವಿಭಿನ್ನವಾದ ಲುಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ.

ಏಳು ವರ್ಷದ ಮಗುವೊಂದು ತನ್ನ ಹೆತ್ತ ತಂದೆ–ತಾಯಿಯ ಹತ್ಯೆಗೆ ಮುಂದಾಗಿದ್ದ ಘಟನೆಯೇ ಈ ಚಿತ್ರಕ್ಕೆ ಪ್ರೇರಣೆಯಂತೆ. ಪೋಷಕರ ನಿರ್ಲಕ್ಷ್ಯದಿಂದ ಚಿಣ್ಣರ ಮನಸ್ಸು ಹೇಗೆ ಬದಲಾಗುತ್ತದೆ; ಅದು ಪೋಷಕರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದೇ ಈ ಚಿತ್ರದ ಹೂರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.