ADVERTISEMENT

ಪಾತ್ರದ ಆಯ್ಕೆಗೆ ‘ರಂಗಿತರಂಗ’ ಬೆಡಗಿ ರಾಧಿಕಾ ಸೂತ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 0:50 IST
Last Updated 17 ಏಪ್ರಿಲ್ 2020, 0:50 IST
ರಾಧಿಕಾ ನಾರಾಯಣ್
ರಾಧಿಕಾ ನಾರಾಯಣ್   

ರಂಗಿತರಂಗ ಚಿತ್ರದ ಮೂಲಕ ಕನ್ನಡ ಸಿನಿತೆರೆಯ ಮೇಲೆ ಜಾಗ ಕಂಡುಕೊಂಡವರು ರಾಧಿಕಾ ನಾರಾಯಣ್. ‘ಮುಂದಿನ ನಿಲ್ದಾಣ’, ‘ಶಿವಾಜಿ ಸುರತ್ಕಲ್’ ಅವರ ತೀರಾ ಈಚಿನ ಚಿತ್ರಗಳು. ಪಾತ್ರಗಳ ಆಯ್ಕೆಗೆ ಕೆಲವು ಸೂತ್ರಗಳನ್ನು ಪಾಲಿಸಿಕೊಂಡು ಬಂದಿರುವ ರಾಧಿಕಾ, ‘ರಂಗಿತರಂಗ’ ಚಿತ್ರದ ಯಶಸ್ಸು ತಮ್ಮ ಪಾತ್ರಗಳ ಆಯ್ಕೆಯ ವಿಚಾರದಲ್ಲಿ ಈಗಲೂ ಪ್ರಭಾವ ಬೀರುತ್ತಿದೆ ಎನ್ನುತ್ತಾರೆ.

‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ರಾಧಿಕಾ, ತಮ್ಮ ಸಿನಿಮಾ ಯಾನದ ಹತ್ತು ಹಲವು ಸಂಗತಿಗಳ ಬಗ್ಗೆ ವಿವರ ಹಂಚಿಕೊಂಡರು. ‘ಮೊದಲ ಸಿನಿಮಾ (ರಂಗಿತರಂಗ) ದೊಡ್ಡ ಹಿಟ್ ಆಗಿದ್ದರ ಪರಿಣಾಮ ಏನು ಎಂಬುದು ನನಗೆ ಈಗ ಗೊತ್ತಾಗುತ್ತಿದೆ. ಆ ಚಿತ್ರ ಹಿಟ್ ಆದಾಗಲೇ ಅದರ ಪರಿಣಾಮಗಳ ಬಗ್ಗೆ ಒಂದಿಷ್ಟು ಗೊತ್ತಾಗಿತ್ತು. ಆದರೆ, ಈಗ ಇನ್ನೂ ಹೆಚ್ಚು ಗೊತ್ತಾಗುತ್ತ ಇದೆ. ಆಗ ಆ ಸಿನಿಮಾ ಒಂದು ವರ್ಷ ಪ್ರದರ್ಶನ ಕಂಡಿತು. ಅದರಲ್ಲಿ ಯಾರೂ ದೊಡ್ಡ ಸ್ಟಾರ್ ಇರಲಿಲ್ಲ, ಚಿತ್ರದಲ್ಲಿ ಮಸಾಲೆ ಕೂಡ ಇರಲಿಲ್ಲ. ಜನರಿಗೆ ಅದರಲ್ಲಿದ್ದ ಕಥೆ ಮೆಚ್ಚುಗೆ ಆಯಿತು. ಈಗಲೂ ಜನ ನನ್ನನ್ನು ಗುರುತಿಸಿರುವುದು ಆ ಸಿನಿಮಾ ಮೂಲಕವೇ’ ಎನ್ನುತ್ತ ಮಾತು ಆರಂಭಿಸಿದರು ರಾಧಿಕಾ.

‘ರಂಗಿತರಂಗ ಚಿತ್ರದ ಯಶಸ್ಸು, ನನ್ನ ಮುಂದಿನ ಸಿನಿಮಾಗಳ ಆಯ್ಕೆ ಮೇಲೆ ಪ್ರಭಾವ ಬೀರಿತು. ಆಗ ನಾನು ವೀಕ್ಷಕರ ಜೊತೆ ಮಾತುಕತೆ ನಡೆಸಿದ್ದಾಗ, ನೀವು ಈ ರೀತಿಯ ಸಿನಿಮಾಗಳಲ್ಲೇ ನಟಿಸಬೇಕು ಎಂದು ಬಹಳಷ್ಟು ಜನ ನನಗೆ ಹೇಳಿದ್ದರು. ಒಳ್ಳೆಯ ಸ್ಕ್ರಿಪ್ಟ್ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸಿ ಎಂದು ಜನ ಹೇಳಿದ್ದರು. ವೀಕ್ಷಕರಿಂದ ಈ ರೀತಿಯ ಮೆಚ್ಚುಗೆಯ ಮಾತುಗಳು ಬಂದಾಗ ಕಲಾವಿದರಾದ ನಮ್ಮ ಹೊಣೆ ಹೆಚ್ಚಾಗುತ್ತದೆ. ಒಳ್ಳೆಯ ಸಿನಿಮಾ, ಒಳ್ಳೆಯ ಕಥೆ ಇರಬೇಕು, ಕಥೆ ಹೇಳುವ ವಿಧಾನ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅದಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

ರಾಧಿಕಾ ಅವರ ಸಿನಿಮಾ ಯಾನದಲ್ಲಿ ‘ರಂಗಿತರಂಗ’ ನಂತರ ಸಿಕ್ಕ ದೊಡ್ಡ ಹಿಟ್ ‘ಮುಂದಿನ ನಿಲ್ದಾಣ’ ಸಿನಿಮಾ. ಟಿ.ಎನ್. ಸೀತಾರಾಂ ನಿರ್ದೇಶನದ ‘ಕಾಫಿತೋಟ’ ಸಿನಿಮಾ ಕೂಡ ರಾಧಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ‘ಮುಂದಿನ ನಿಲ್ದಾಣ ಚಿತ್ರದಲ್ಲಿ ನಾನು ಬೇರೆ ರೀತಿಯಲ್ಲಿ ಕಾಣಿಸಿಕೊಂಡೆ. ರಂಗಿತರಂಗ ಚಿತ್ರದ ಪಾತ್ರಕ್ಕೆ ಹೋಲಿಸಿದರೆ, ಮುಂದಿನ ನಿಲ್ದಾಣದಲ್ಲಿನ ಪಾತ್ರ ಬಹಳ ಭಿನ್ನ. ಈ ರೀತಿ ಭಿನ್ನ ಪಾತ್ರಗಳು ಸಿಕ್ಕಿದ್ದು ಖುಷಿ ನೀಡಿತು’ ಎಂದು ಹೇಳಿಕೊಂಡರು ರಾಧಿಕಾ.

‘ರಂಗಿತರಂಗ ಸಿನಿಮಾದಿಂದ ಆರಂಭಿಸಿ ಶಿವಾಜಿ ಸುರತ್ಕಲ್‌ ಸಿನಿಮಾವರೆಗೆ ಯಾವುದಾದರೂ ಪಾತ್ರವನ್ನು ಆಯ್ಕೆ ಮಾಡಿಕೊಂಡು ತಪ್ಪು ಮಾಡಿಬಿಟ್ಟೆ ಎಂದು ಅನಿಸಿದ್ದು ಇಲ್ಲ. ಸಿನಿಮಾ ಕಥೆ ಕೇಳುವ ನಮಗೆ, ಸಿನಿಮಾ ನಿರ್ದೇಶಕರಿಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಉದ್ದೇಶವೇ ಇರುತ್ತದೆ. ಕೆಟ್ಟ ಸಿನಿಮಾ ಮಾಡಬೇಕು ಎಂಬ ಉದ್ದೇಶ ಯಾರಲ್ಲೂ ಇರುವುದಿಲ್ಲ. ಆದರೆ ಕೆಲವೊಮ್ಮೆ ಸ್ಕ್ರಿಪ್ಟ್‌ನಲ್ಲಿ ಇರುವ ರೀತಿಯಲ್ಲೇ ಪಾತ್ರಗಳನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವಾರು ಇರುತ್ತವೆ. ನಾವು ಅಂದುಕೊಂಡ ರೀತಿಯಲ್ಲಿ ಪಾತ್ರಗಳು ಜೀವ ಪಡೆದುಕೊಳ್ಳುವುದಿಲ್ಲ. ಹಾಗೆ ಆದಾಗ, ಅದೂ ಒಂದು ಕಲಿಕೆ ಎಂದು ಭಾವಿಸುವೆ. ನಾನು ಕೆಲವು ಪಾತ್ರಗಳನ್ನು ತಿರಸ್ಕರಿಸಿದ್ದು ಇದೆ. ಆದರೆ ಪಾತ್ರವನ್ನು ನಿಭಾಯಿಸಿ, ನಂತರ ಅದನ್ನು ಏಕೆ ಮಾಡಿಬಿಟ್ಟೆ ಎಂದು ಕೊರಗಿದ್ದು ಇಲ್ಲ’ ಎಂದು ತಾವು ನಿಭಾಯಿಸಿದ ಪಾತ್ರಗಳ ಕುರಿತು ಸುದೀರ್ಘವಾಗಿ ವಿವರ ನೀಡಿದರು.

ಸಿನಿಮಾಕ್ಕೆ ಬಂದ ಕಥೆ: ‘ನಾನು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ಕಿರುಚಿತ್ರ ಕೂಡ ಮಾಡಿದ್ದೆ. ಅದನ್ನು ನೋಡಿದ ರಂಗಿತರಂಗ ತಂಡ, ನನಗೆ ಕರೆ ಮಾಡಿತು. ಆಡಿಷನ್ ಕೊಡಲು ಆ ಸಿನಿತಂಡ ಹೇಳಿತು. ಸ್ಕೈಪ್‌ ಮೂಲಕ ಆಡಿಷನ್ ಕೊಟ್ಟಿದ್ದೆ. ಅನೂಪ್ ಭಂಡಾರಿ ಅವರು ಅಮೆರಿಕದಲ್ಲಿ ಕುಳಿತು ನನ್ನ ಆಡಿಷನ್ ನೋಡಿದ್ದರು. ಆ ಸಮಯದಲ್ಲಿ ನನಗೆ ಧಾರಾವಾಹಿ ಕಡೆ ಮುಖ ಮಾಡಬೇಕೋ, ಸಿನಿಮಾ ಕಡೆ ಮುಖ ಮಾಡಬೇಕೋ ಎಂಬ ಪ್ರಶ್ನೆಯೂ ಇತ್ತು. ಕೊನೆಗೆ ಪೂರ್ತಿ ಗಮನವನ್ನು ಸಿನಿಮಾ ಕಡೆ ನೀಡಿದೆ’ ಎಂದರು.

ಪಾತ್ರಗಳನ್ನು ಒಪ್ಪಿಕೊಳ್ಳುವಾಗ ರಾಧಿಕಾ ಅವರು ಗಮನಿಸುವುದು ಕ್ರಿಪ್ಟ್‌ಅನ್ನು. ‘ನಾನು ಹಿಂದೆ ಮಾಡಿದ್ದ ಪಾತ್ರಗಳನ್ನೇ ಮತ್ತೆ ಮಾಡಲು ಹೋಗುವುದಿಲ್ಲ. ಹಿಂದೆ ನಾನು ಮಾಡಿರದ ಪಾತ್ರ ಸಿಕ್ಕರೆ ನನ್ನಲ್ಲಿ ಅದರ ಬಗ್ಗೆ ಆಸಕ್ತಿ ಮೂಡುತ್ತದೆ. ನಿರ್ದೇಶಕ ಯಾರು ಎಂಬುದೂ ನನಗೆ ಮುಖ್ಯ’ ಎಂದು ಪಾತ್ರಗಳ ಆಯ್ಕೆಯ ವೇಳೆ ತಾವು ಅನುಸರಿಸುವ ಸೂತ್ರ ತಿಳಿಸಿದರು.

ಕೊರೊನಾ ಹಾವಳಿ ಮುಗಿದ ನಂತರ ‘ಶಿವಾಜಿ ಸುರತ್ಕಲ್’ ಚಿತ್ರ ಪುನಃ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಹಾಗಾಗಿ, ರಾಧಿಕಾ ಅವರ ಗಮನ ಆ ಚಿತ್ರದ ಮೇಲೆಯೂ ಒಂದಿಷ್ಟು ಇದೆ. ಜೊತೆಯಲ್ಲೇ, ತಾವು ಅಭಿನಯಿಸಿರುವ ಚೇಸ್ ಸಿನಿಮಾ ಬಿಡುಗಡೆಯತ್ತ ಕೂಡ ಅವರ ದೃಷ್ಟಿ ನೆಟ್ಟಿದೆ. ಇದು ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಮನೆ ಭಾಷೆ ತುಳು

ರಾಧಿಕಾ ಅವರ ಮೂಲ ಇರುವುದು ಉಡುಪಿಯಲ್ಲಿ. ಅವರು ಮನೆಯಲ್ಲಿ ಮಾತನಾಡುವುದು ತುಳು ಭಾಷೆಯನ್ನು. ಓದಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ‘ನನ್ನ ಅಜ್ಜಿ (ತಾಯಿಯ ತವರು) ಮನೆ ಕೊಳ್ಳೆಗಾಲ. ಅಲ್ಲಿಯೇ ನಾನು ಹುಟ್ಟಿದ್ದು. ನಾನು ಬೇಸಿಗೆ ರಜೆಗಳನ್ನು ಕಳೆದಿದ್ದು ಕೊಳ್ಳೆಗಾಲದಲ್ಲಿ. ಕುಟುಂಬದ ಕಾರ್ಯಕ್ರಮಗಳು ನಡೆಯುವುದು ಉಡುಪಿಯಲ್ಲಿ. ಈಗ ಇರುವುದು ಬೆಂಗಳೂರಿನಲ್ಲಿ’ ಎಂದು ತಿಳಿಸಿದರು ರಾಧಿಕಾ.

**

‘ಮುಂದಿನ ನಿಲ್ದಾಣ’ ಸಿನಿಮಾದ ಪಾತ್ರ ನನಗೆ ಬಹಳ ಹತ್ತಿರ. ಹಾಗೆಯೇ, ‘ರಂಗಿತರಂಗ’ದ ಪಾತ್ರ ಕೂಡ.
–ರಾಧಿಕಾ ನಾರಾಯಣ್, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.