ADVERTISEMENT

ಕನ್ನಡದ ಮೊದಲ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 0:30 IST
Last Updated 28 ಜನವರಿ 2026, 0:30 IST
ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅನು ಪ್ರಭಾಕರ್‌, ಶ್ರೀನಿವಾಸ ಮೂರ್ತಿ, ಕೋಮಲ್‌ ಅವರೊಂದಿಗೆ ರಾಘವೇಂದ್ರ ಚಿತ್ರವಾಣಿ ತಂಡ. 
ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅನು ಪ್ರಭಾಕರ್‌, ಶ್ರೀನಿವಾಸ ಮೂರ್ತಿ, ಕೋಮಲ್‌ ಅವರೊಂದಿಗೆ ರಾಘವೇಂದ್ರ ಚಿತ್ರವಾಣಿ ತಂಡ.    

ಕನ್ನಡದ ಮೊದಲ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಸುವರ್ಣ ಸಂಭ್ರಮ. ಅದರ ಬೆನ್ನಲ್ಲೇ ವಿಶೇಷ ಲಾಂಛನವನ್ನು ಸಂಸ್ಥೆ ಇತ್ತೀಚೆಗಷ್ಟೇ ಅನಾವರಣಗೊಳಿಸಿತು. ನಟರಾದ ಶ್ರೀನಿವಾಸಮೂರ್ತಿ, ಕೋಮಲ್‌ ಹಾಗೂ ನಟಿ ಅನು ಪ್ರಭಾಕರ್‌ ಲಾಂಛನ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

‘1976ರಲ್ಲಿ ದಿವಂಗತ ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಪ್ರಾರಂಭಿಸಿದರು. ಅದೇ ವರ್ಷ ನಾನು ಕೂಡ ಚಿತ್ರರಂಗಕ್ಕೆ ಕಾಲಿಟ್ಟೆ. ನಿರ್ದೇಶಕ ಸಿದ್ದಲಿಂಗಯ್ಯ, ನಿರ್ಮಾಪಕ ವರದರಾಜ್‌ ಅವರೆಲ್ಲ ಆಗ ಹೆಚ್ಚಾಗಿ ಮೆಜೆಸ್ಟಿಕ್‌ನ ಟೂರಿಸ್ಟ್‌ ಹೊಟೇಲ್‌ನಲ್ಲಿ ಇರುತ್ತಿದ್ದರು. ಅಲ್ಲಿಗೆ ಸುಧೀಂದ್ರ ಬರುತ್ತಿದ್ದರು. ಅಲ್ಲಿಂದ ನಮ್ಮ ಒಡನಾಟ ಪ್ರಾರಂಭವಾಯಿತು. ಸಿನಿಮಾ ಪ್ರಚಾರ ಸಂಸ್ಥೆಯೊಂದು 50 ವರ್ಷ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು. ಐವತ್ತು ನೂರಾಗಲಿ, ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ’ ಎಂದು ಶ್ರೀನಿವಾಸಮೂರ್ತಿ ಹಾರೈಸಿದರು. 

‘ನಾನು ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕಾಲದಲ್ಲಿ ನೀವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯುತ್ತೀರಾ ಎಂದು ನನಗೆ ಹಾರೈಸಿದವರು ಸುಧೀಂದ್ರ. ಅವರನ್ನು ಬಹಳ ಬೇಗ ಕಳೆದುಕೊಂಡೆವು. ಆದರೂ ವೆಂಕಟೇಶ್‌ ಮತ್ತು ಅವರ ಕುಟುಂಬದವರು ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ’ ಎಂದು ಸಂಸ್ಥೆ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು ಕೋಮಲ್‌. 

ADVERTISEMENT

‘ಈವರೆಗೂ ಸುಮಾರು 3000ಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ಕಾರ್ಯ ನೀಡಿರುವ ಏಕಮಾತ್ರ ಸಂಸ್ಥೆ ನಮ್ಮದು. ಐವತ್ತರ ಸಂಭ್ರಮವನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲು ಆಲೋಚಿಸಿದ್ದೇವೆ. ಜತೆಗೆ ಮುಂದಿನ ದಿನಗಳಲ್ಲಿ ಸಹಭಾಗಿತ್ವದಲ್ಲಿ ಸಿನಿಮಾ ನಿರ್ಮಾಣದ ಗುರಿಯೂ ಇದೆ’ ಎಂದು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ರೂವಾರಿ ವೆಂಕಟೇಶ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.