ನಟ ರಾಜ್ ಬಿ.ಶೆಟ್ಟಿ ‘ಟೋಬಿ’ಯಾಗಿ ಪ್ರೇಕ್ಷಕರೆದುರಿಗೆ ಬರಲು ಸಜ್ಜಾಗಿದ್ದಾರೆ. ‘ಶಿವ’ನಾಗಿ ತೆರೆಯಲ್ಲಿ ತಾಂಡವವಾಡಿದ್ದ ರಾಜ್, ಇದೀಗ ತಮ್ಮೊಳಗಿದ್ದ ಸಿಟ್ಟಿಗೆ ‘ಅನ್ಯಾಯ’ವಾಗಬಾರದು ಎಂದು ಅದಕ್ಕೆ ಸಿನಿಮಾ ರೂಪ ನೀಡಿದ್ದಾರೆ. ‘ಟೋಬಿ’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದೇ ಆ.25ಕ್ಕೆ ಸಿನಿಮಾ ತೆರೆಕಾಣಲಿದೆ. ಈ ಹೊಸ್ತಿಲಲ್ಲಿ ಅವರೊಂದಿಗೊಂದು ಮಾತುಕತೆ...
ಹಳೆಯ ಕಥೆಗೆ ಹೊಸ ಸ್ಪರ್ಶ ಸಿಕ್ಕಿದ್ದು ಹೇಗೆ?
ಸಂಬಂಧಗಳನ್ನು ಪ್ರಮುಖವಾಗಿ ಉಳ್ಳ ಸೇಡಿನ ಕಥನ ‘ಟೋಬಿ’. ನಮ್ಮ ‘ಲಾಫಿಂಗ್ ಬುದ್ಧ’ ನಿರ್ಮಾಣ ಸಂಸ್ಥೆಯಡಿ ಯಾವುದೇ ಮಾಸ್ ಜಾನರ್ ಸಿನಿಮಾವನ್ನು ಮಾಡಿರಲಿಲ್ಲ. ಕಂಟೆಂಟ್ ಸಿನಿಮಾ ಮಾಡಿ, ಮಾಸ್ ಟಚ್ ನೀಡಿದರೆ ಯಾವ ರೀತಿ ಇರಬಹುದು ಎನ್ನುವ ಆಲೋಚನೆ ನಮ್ಮಲ್ಲಿತ್ತು. ಅದಕ್ಕೇ ಈ ಕಥೆಯನ್ನು ಆಯ್ಕೆ ಮಾಡಿಕೊಂಡೆವು. ಟಿ.ಕೆ.ದಯಾನಂದ್ ಅವರು ಮೂಲಕಥೆ ಬರೆದಿದ್ದರು. ಅದರಲ್ಲಿರುವ ಪಾತ್ರ ಮತ್ತು ಕೆಲವು ವಿಷಯಗಳನ್ನು ಇಟ್ಟುಕೊಂಡು ‘ಟೋಬಿ’ಗೆ ಹೊಸ ರೂಪ ನೀಡಿದೆ. ಮೂಲಕಥೆಯಲ್ಲಿನ ಪಾತ್ರವನ್ನು ಹೊರತುಪಡಿಸಿ ಬೇರೆಲ್ಲವೂ ನನ್ನ ಬರವಣಿಗೆಯಲ್ಲಿ ಬದಲಾವಣೆ ಕಂಡಿದೆ. ಚಿತ್ರಮಂದಿರಕ್ಕೆ ಜನರನ್ನು ಕರೆದು ತರುವ ದೊಡ್ಡ ಸವಾಲು ಕನ್ನಡದಲ್ಲಿದೆ. ಜನರನ್ನು ಸೆಳೆಯುವ ಸಿನಿಮಾಗಳನ್ನು ಮಾಡಬೇಕು. ‘ಟೋಬಿ’ ಅಂತಹ ಪ್ರಯತ್ನ.
‘ಟೋಬಿ’ ನಿರ್ದೇಶನಕ್ಕೆ ಯಾಕೆ ಕೈಹಾಕಲಿಲ್ಲ?
ಈ ಸಿನಿಮಾವನ್ನು ಒಂದು ತಂಡವಾಗಿ ಮಾಡಬೇಕು ಎಂದು ಮೊದಲೇ ನಿರ್ಧರಿಸಿದ್ದೆವು. ‘ಟೋಬಿ’ಯನ್ನು ನಾನೇ ನಿರ್ದೇಶನ ಮಾಡಬೇಕಿತ್ತು. ಆದರೆ ಈ ಸಂದರ್ಭದಲ್ಲಿ ನಾನು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ದೇಶಿಸುತ್ತಿದ್ದೆ. ಈ ಹಂತದಲ್ಲೇ ‘ಟೋಬಿ’ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸ ಆರಂಭವಾಗಬೇಕಿತ್ತು. ಅದಕ್ಕಾಗಿ ಈ ಕಾರ್ಯವನ್ನು ನನ್ನದೇ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದ ಬಾಸಿಲ್ ಅಲ್ಚಲಕ್ಕಲ್‌ಗೆ ನೀಡಿದೆ. ನಮ್ಮದೇ ಸ್ಕೂಲ್‌ನ ವಿದ್ಯಾರ್ಥಿ ಇವನಾಗಿರುವ ಕಾರಣ, ನಮಗೆ ಯಾವ ರೀತಿ ಸಿನಿಮಾ ಬೇಕು ಅದೇ ರೀತಿ ಸಿನಿಮಾ ಆಗುತ್ತದೆ ಎನ್ನುವ ವಿಶ್ವಾಸವೂ ನನ್ನಲ್ಲಿತ್ತು.
ಪಾತ್ರಗಳಲ್ಲಿನ ಪ್ರಯೋಗದ ಬಗ್ಗೆ ಹೇಳಿ.
ಒಂದೇ ರೀತಿಯ ಪಾತ್ರಗಳು ಅಥವಾ ಜಾನರ್ ನನಗೆ ಬೇಗನೆ ಬೋರ್ ಹೊಡೆಸುತ್ತವೆ. ಒಂದು ಸಿನಿಮಾ ಮೊದಲು ನನಗೆ ಮನರಂಜನೆ ನೀಡಬೇಕು. ಹಾಗಿದ್ದರಷ್ಟೇ ಪ್ರೇಕ್ಷಕನಿಗೂ ಮನರಂಜನೆ ನೀಡುವ ಸಾಮರ್ಥ್ಯವನ್ನು ಆ ಸಿನಿಮಾ ಹೊಂದಿದೆ ಎಂದರ್ಥ. ಈ ಪ್ರಯತ್ನ ಬೇರಾರಿಗೂ ಅಲ್ಲ. ಇವೆಲ್ಲವೂ ನನಗಾಗಿ. ಒಂದು ಮೊಟ್ಟೆಯ ಕಥೆ ಮಾಡಿದ ಸಂದರ್ಭದಲ್ಲಿ ನನ್ನನ್ನು ಅದೇ ರೀತಿಯ ಪಾತ್ರದಲ್ಲಿ ಜನ ಕಾಣಲಿಚ್ಛಿಸಿದರು. ಆದರೆ, ಹೊಸ ಬರವಣಿಗೆ ಮುಖಾಂತರ ಅವರನ್ನು ನಂಬಿಸಿದ್ದು ನಾನೇ ಅಲ್ಲವೇ. ಬರವಣಿಗೆ ಗಟ್ಟಿಯಾಗಿರಬೇಕಷ್ಟೇ.
‘ಟೋಬಿ’ಯ ಸವಾಲು...
ಬೇರೆ ಎಲ್ಲ ಸಿನಿಮಾಗಳಿಗೆ ಹಾಕಿದ್ದ ಒಟ್ಟು ಪ್ರಯತ್ನವನ್ನು ಇದೊಂದೇ ಸಿನಿಮಾ ವಿಷಯದಲ್ಲಿ ನಾನು ಹಾಕಿದ್ದೇನೆ. ‘ಇನ್ನು ಜೀವಮಾನದಲ್ಲಿ ನಾನು ನಿಮ್ಮ ಜೊತೆ ಸಿನಿಮಾ ಮಾಡಲ್ಲ’ ಎನ್ನುವಷ್ಟರ ಮಟ್ಟಿಗೆ ನನ್ನ ತಂಡಕ್ಕೆ ಕೈಮುಗಿದು ಹೇಳಿದ್ದೆ. ‘ಟೋಬಿ’ಯಲ್ಲಿರುವ ನನ್ನ ನಟನೆ, ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿನ ಪಾತ್ರಕ್ಕಿಂತಲೂ ಸವಾಲಿನಿಂದ ಕೂಡಿತ್ತು. ‘ಶಿವ’ನಿಗಿಂತಲೂ ‘ಟೋಬಿ’ ಹೆಚ್ಚು ಸವಾಲನ್ನೊಡ್ಡಿತ್ತು. ಪಾತ್ರದೊಳಗಿನ ಭಾವನೆ, ತೀವ್ರತೆ ನನ್ನನ್ನು ಕಾಡಿತು, ಸ್ಪರ್ಧೆಗೊಡ್ಡಿತ್ತು. ದೊಡ್ಡ ಬಜೆಟ್‌ನ ಸಿನಿಮಾ ಮಾಡುವಾಗ ಸವಾಲುಗಳು ಹೆಚ್ಚುತ್ತಲೇ ಹೋಗುತ್ತವೆ. ಕಲಾವಿದರನ್ನು ನಿರ್ವಹಿಸುವುದು, ಸಾಹಸ ದೃಶ್ಯಗಳನ್ನು ಸಂಯೋಜಿಸುವುದು, ಅದರ ಜೊತೆಗೆ ನಟನೆ, ತಂಡಕ್ಕೆ ಗೈಡ್ ಮಾಡುವುದು ಹೀಗೆ ಎಲ್ಲ ಹೊರೆಗಳು ನನ್ನ ಮೇಲೆ ಬಿದ್ದಾಗ ನನ್ನ ಪಾತ್ರದೊಳಗಿನ ಸಿಟ್ಟು ಅವರ ಮೇಲೆ ಹೋಗುತ್ತಿತ್ತು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದು ಸಿನಿಮಾ ನಿಮ್ಮನ್ನು ಪುಶ್ ಮಾಡಿದರೆ, ಆ ಸಿನಿಮಾ ಒಂದು ಗಡಿಯನ್ನು ಮೀರಿ ಹೋಗುತ್ತದೆ. ಜನರಿಗೂ ಹತ್ತಿರವಾಗುತ್ತದೆ. ‘ಟೋಬಿ’ ಅಂತಹ ಅನುಭವ ನೀಡಿದೆ.
ನಿರ್ದೇಶಕನಾಗದೇ ಇದ್ದ ಸವಾಲು...
ಖಂಡಿತವಾಗಿಯೂ ಇದನ್ನು ನಾನು ಚಿತ್ರೀಕರಣದ ಸಂದರ್ಭದಲ್ಲಿ ಅನುಭವಿಸಿದ್ದೇನೆ. ಚಿತ್ರವನ್ನು ಬರೆದಿದ್ದು ನಾನೇ ಅಲ್ಲವೇ. ಹೀಗಾಗಿ ಅದರ ಕಲ್ಪನೆ ನನ್ನದು, ದೃಶ್ಯಗಳು ಯಾವ ರೀತಿ ಬರಬೇಕು ಎನ್ನುವುದು ನನಗೆ ಗೊತ್ತಿತ್ತು. ಈ ರೀತಿಯಲ್ಲೇ ನಾನು ತಂಡವನ್ನು ಪುಶ್ ಮಾಡುತ್ತಿದ್ದೆ. ಅದು ತಂಡಕ್ಕೆ ಇನ್ನೂ ಕಷ್ಟವಾಗತೊಡಗಿತು. ನಾನು ನಿರ್ದೇಶಕನಾದರೆ, ನನ್ನ ನಿರ್ದೇಶನ ತಂಡ ಸಂಪೂರ್ಣ ನನ್ನ ಮೇಲೆಯೇ ನಂಬಿಕೆ ಇಡುತ್ತಿತ್ತು. ‘ರಾಜಣ್ಣ ಮಾಡ್ತಾರೆ ಬಿಡು..’ ಎನ್ನುತ್ತಿದ್ದರು. ಯಾವಾಗಲೂ ಕಷ್ಟ ಕೊಡ್ತೀರಲ್ವ ಎಂದು ಈ ಬಾರಿ ಸಂಪೂರ್ಣ ಜವಾಬ್ದಾರಿಯನ್ನು ಅವರ ಮೇಲೆ ಹಾಕಿ ನಾನು ಕೆಲಸ ಮಾಡಿದೆ. ಇದರಿಂದಾಗಿ ಟೋಬಿ ಆಯ್ತು.
ಯಾವುದು ಆ ಸಿಟ್ಟು?
ಪ್ರತಿ ಕಥೆಯೂ ಅನುಭವಗಳಿಂದಲೇ ಹುಟ್ಟಿಕೊಳ್ಳುತ್ತವೆ. ಒಂದು ಮೊಟ್ಟೆಯ ಕಥೆ ನನ್ನದೇ ಅನುಭವದ ಕಥೆ. ‘ಗರುಡ ಗಮನ...’ ವ್ಯಕ್ತಿಯೊಬ್ಬನಿಗೆ ಹೆಸರು ಬಂದ ತಕ್ಷಣ ಹೇಗೆ ಬದಲಾಗುತ್ತಾನೆ, ಸಂಬಂಧಗಳು ಹೇಗೆ ಬದಲಾಗುತ್ತವೆ ಎಂಬುವುದಾಗಿತ್ತು. ಇದೂ ಅನುಭವವೇ. ‘ಟೋಬಿ’ ಸಿನಿಮಾ ಮಾಡಬೇಕಾದರೂ ಅದರ ಹಿಂದೆ ಅನುಭವವಿತ್ತು. ಅದನ್ನು ನಾನಿಲ್ಲಿ ಹೇಳಲಿಚ್ಛಿಸುವುದಿಲ್ಲ. ಆ ಅನುಭವಕ್ಕೆ ಒಂದು ತೀಕ್ಷ್ಣವಾದ ಸಿಟ್ಟು ಇತ್ತು. ಆ ಸಿಟ್ಟು ಅನ್ಯಾಯವಾಗಿ ವೇಸ್ಟ್ ಆಗುವುದು ನನಗೆ ಇಷ್ಟವಿರಲಿಲ್ಲ. ಈ ಸಿಟ್ಟು ಸುಂದರವಾಗಿ ಒಂದು ಸಿನಿಮಾದ ರೂಪ ಪಡೆಯಬಹುದು, ಪಾತ್ರಗಳಲ್ಲೇ ಈ ಸಿಟ್ಟು ಹಾಕಬಹುದು ಎಂದೆನಿಸಿತು. ತುಂಬಾ ಕೆಣಕಿದ್ರೆ ಕುರಿಯೂ ಗುದ್ದಲು ಪ್ರಾರಂಭಿಸುತ್ತದೆ (ನಗುತ್ತಾ). ಈ ಐಡಿಯಾ ಕೊಟ್ಟವರಿಗೆಲ್ಲಾ ತುಂಬಾ ಥ್ಯಾಂಕ್ಸ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.