ADVERTISEMENT

14 ಕೆ.ಜಿ ತೂಕದ ಚಿಟ್ಟಿ ವೇಷ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:30 IST
Last Updated 22 ನವೆಂಬರ್ 2018, 19:30 IST
‘2.0’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ಹಾಗೂ ರಜನೀಕಾಂತ್
‘2.0’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ಹಾಗೂ ರಜನೀಕಾಂತ್   

ಎಂಟು ವರ್ಷಗಳ ಹಿಂದೆ ಬಂದ ರೋಬೊಟ್‌ ಚಿತ್ರದಲ್ಲಿ ರೋಬೊಗಳಿಗೂ ಹೃದಯವಿದೆ ಎಂದು ಚಿಟ್ಟಿ ಪಾತ್ರದ ರಜನೀಕಾಂತ್‌ ಹಾಗೂ ನಿರ್ದೇಶಕ ಶಂಕರ್‌ ತೋರಿಸಿದ್ದಾರೆ. ಭಾವನಾತ್ಮಕ ರೋಬೊ ಆ ಚಿತ್ರದಲ್ಲಿ ಪ್ರೀತಿಗಾಗಿ ತಹತಹಿಸುತ್ತಿತ್ತು. ಹಪಹಪಿಸಿತ್ತು. ಆ ಒಂದು ಹಿಡಿ ಪ್ರೀತಿ ಪಡೆಯಲು ಏನೆಲ್ಲ ರಾದ್ಧಾಂತ ಸೃಷ್ಟಿಸಿತು. ಇದೀಗ ಅದರ ಮುಂದುವರಿದ ಭಾಗ 2.0 ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಚಿಟ್ಟಿ ಜೊತೆಗೆ ನೀಲಾ ಎಂಬ ಸುಂದರಿ ರೋಬೊ ಸಹ ಬರುತ್ತಿದೆ.

ಇದು ಎರಡು ರೋಬೊಗಳ ಪ್ರೇಮಕತೆ. ಇವರಿಬ್ಬರ ಪ್ರೇಮಕ್ಕೆ ಅಡ್ಡಿಯಾಗಲಿದ್ದಾರೆಯೇ ಅಕ್ಷಯ್‌ ಕುಮಾರ್‌? ಅಕ್ಕಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಆ್ಯಮಿ ಜಾಕ್ಸನ್‌ ನೀಲಾ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಪಾತ್ರ ಪ್ರವೇಶದ ಬಗೆಗೆ ಅವರು ಒಂದಷ್ಟು ಹೇಳಿದ್ದಾರೆ ಕೇಳಿ.

ಯಂತ್ರಗಳಂತೆ ನಿರ್ಭಾವುಕವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟವಾಗಿತ್ತು. ನನಗೆ ಆ ಪಾತ್ರ ಪ್ರವೇಶಿಸುವುದೇ ಕಷ್ಟವಾಗಿತ್ತು. ಆದರೆ ರಜನಿಕಾಂತ್‌ ಹಾಗೂ ನಿರ್ದೇಶಕ ಶಂಕರ್‌ ಇಬ್ಬರ ಸಹಕಾರದಿಂದ ಈ ಪಾತ್ರವನ್ನು ಪ್ರವೇಶಿಸುವುದು ಸಾಧ್ಯವಾಯಿತು. ನಂತರ ಯಂತ್ರ ಮಾನವನಂತೆ ಯೋಚಿಸತೊಡಗಿದೆ. ಕ್ರಿಯೆಗಳನ್ನೂ ಯೋಜಿಸಿ, ಪ್ರಜ್ಞಾಪೂರ್ವಕವಾಗಿ ಅಭಿನಯಿಸತೊಡಗಿದೆ. ಇದಾದ ನಂತರ ಒಂದಿನ ಶಂಕರ್‌,‘ ಆ್ಯಮಿ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ರೋಬೊ ಸೂಟ್‌ನಲ್ಲಿ ಸುಲಭವಾಗಿ ಫಿಟ್‌ ಆಗುವಂಥ ಮೈಮಾಟವಿದೆ. ಅಷ್ಟೇ ಅಲ್ಲ, ಅವರು ಪರಿಶ್ರಮಿಗಳು. ಹೇಳಿದ್ದನ್ನು ಅರ್ಥೈಸಿಕೊಂಡು, ಸುಲಭವಾಗಿ ಪಾತ್ರದೊಳು ಹೊಕ್ಕಿದ್ದಾರೆ ಎಂದು ಹೊಗಳಿದರು. ಆಗಲೇ ಆತಂಕ ಕಡಿಮೆಯಾಯಿತು.

ADVERTISEMENT

ರಜನಿ ಹಾಗೂ ನನ್ನ ನಡುವಿನ ರೋಮ್ಯಾನ್ಸ್‌ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದೂ ಆ್ಯಮಿ ಹೇಳುತ್ತಾರೆ. ರಜನೀಕಾಂತ್‌ ಸಹ ಈ ಸಲ ಮನಬಿಚ್ಚಿ ಮಾತಾಡಿದ್ದಾರೆ. ರೋಬೊ ಸೂಟು ಧರಿಸಿ, ನಟಿಸುವುದು ನನಗೆ ಸುಲಭವಾಗಿರಲಿಲ್ಲ. ಕಷ್ಟಕರವಾಗಿತ್ತು. ವಯಸ್ಸು ಹಾಗೂ ನನ್ನ ಆರೋಗ್ಯ ಎರಡೂ ಸಾಥ್‌ ಕೊಡುತ್ತಿರಲಿಲ್ಲ. ಈ ಪ್ರೊಜೆಕ್ಟ್‌ನಿಂದ ಹೊರ ಉಳಿಯುವೆ ಎಂದಾಗಲೂ ಶಂಕರ್‌ ಒಪ್ಪಲಿಲ್ಲ. ತಾವು ಕಾಯುವುದಾಗಿ ತಿಳಿಸಿದರು. ಆದರೆ ಎಂಟು ವರ್ಷಗಳ ಹಿಂದೆ ಎಷ್ಟು ಸುಲಭವಾಗಿ ಪಾತ್ರ ನಿರ್ವಹಿಸಿದ್ದೆನೋ ಅದೀಗ ಕಷ್ಟವೆನಿಸುತ್ತಿತ್ತು. ಅದರಲ್ಲಿಯೂ ಆ ಚಿಟ್ಟಿ ಬಾಬುವಿನ ಸೂಟ್‌ ಧರಿಸುವುದು ಕಷ್ಟಕರವಾಗಿತ್ತು. 14 ಕೆ.ಜಿ ತೂಗುವ ಈ ಸೂಟ್ ಧರಿಸಿ ಪಾತ್ರ ನಿರ್ವಹಿಸುವುದು ನನಗೆ ಸವಾಲೆಂದೇ ಎನಿಸಿತು’ ಎಂದಿದ್ದಾರೆ.

ಹಿಂದಿ ಭಾಷೆಯ ಚಿತ್ರವನ್ನು ಕರಣ್‌ ಜೋಹರ್‌ ನಿರ್ಮಿಸಿದ್ದಾರೆ. ಈ ಚಿತ್ರ ಇದೇ 29ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.