ADVERTISEMENT

ಅಪ್ಪ, ಮಗನ ಬಾಂಧವ್ಯದ ಕಥನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 19:45 IST
Last Updated 14 ಮಾರ್ಚ್ 2019, 19:45 IST
ಚರಣ್‌ ರಾಜ್
ಚರಣ್‌ ರಾಜ್   

‘ಟೈಗರ್‌ ಪ್ರಭಾಕರ್‌ ಅವರಲ್ಲಿದ್ದ ನಟನಾ ಗತ್ತನ್ನು ನಾನು ಹರೀಶ್‌ ಅವರಲ್ಲಿ ಕಂಡೆ’

ಹಿರಿಯ ನಟ ಚರಣ್‌ ರಾಜ್‌ ಹೀಗೆಂದಾಗ ಪಕ್ಕ ಕೂತಿದ್ದ ನಟ ಹರೀಶ್‌ ಅವರ ಕಣ್ಣಲ್ಲಿ ನೂರು ನಕ್ಷತ್ರಗಳು ಒಮ್ಮೆಲೆ ಹೊತ್ತಿಕೊಂಡಂಥ ಬೆಳಕು. ‘ನಟನೊಬ್ಬ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯುವ ಸಾಮರ್ಥ್ಯ ಆತನ ಮೊದಲ ಸಿನಿಮಾದಲ್ಲಿಯೇ ಕಾಣುತ್ತದೆ. ಡ್ಯೂಪ್‌ ಇಲ್ಲದೆ ಹರೀಶ್‌ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದನ್ನು ನೋಡಿದ್ದೇನೆ. ಅವರ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದರು.

ಅದು ಕೋಲಾರ ಸೀನು ನಿರ್ದೇಶನದ ‘ರಾಜಣ್ಣನ ಮಗ’ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ. ಟೀಸರ್‌ನಲ್ಲಿ ನಾಯಕನ ಮುಖ ತೋರಿಸದೆ ಗುಟ್ಟಾಗಿ ಇಟ್ಟಿದ್ದ ಚಿತ್ರತಂಡ ಟ್ರೇಲರ್‌ನಲ್ಲಿ ಭರ್ಜರಿ ಸಾಹಸ ದೃಶ್ಯಗಳ ಜೊತೆಗೆ ನಾಯಕನನ್ನೂ ಪ್ರೇಕ್ಷಕರಿಗೆ ತೋರಿಸಿದೆ.‌

ADVERTISEMENT

ತಂದೆ ಮತ್ತು ಮಗನ ಸಂಬಂಧದ ಸುತ್ತ ‘ರಾಜಣ್ಣನ ಮಗ’ ಚಿತ್ರ ರೂಪುಗೊಂಡಿದೆಯಂತೆ. ‘ತವರಿನ ತೊಟ್ಟಿಲು’ ಚಿತ್ರದ ಬಳಿಕ ನನಗೆ ಕನ್ನಡದಲ್ಲಿ ಖುಷಿ ಕೊಟ್ಟ ಚಿತ್ರ ‘ರಾಜಾ ಹುಲಿ’. ಈ ಚಿತ್ರದ ಪಾತ್ರವೂ ಖುಷಿ ನೀಡಿದೆ. ನಾನು ರಫ್‌ ಅಂಡ್‌ ಟಫ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನನ್ನಿಂದ ಇಂತಹ ಪಾತ್ರ ಮಾಡಲು ಸಾಧ್ಯವೇ? ಎಂದು ನಿರ್ದೇಶಕರಿಗೆ ಪ್ರಶ್ನಿಸಿದೆ. ಅಣ್ಣಾವ್ರನ್ನು ನೆನಪಿಸಿಕೊಂಡು ನಟಿಸುವಂತೆ ಹೇಳಿದರು. ಆದರೆ, ಅವರಿಗೆ ಸರಿಸಮನಾದ ನಟ ಬೇರೊಬ್ಬರಿಲ್ಲ’ ಎಂದು ಹೇಳಿದರು.

ಹರೀಶ್‌ ಈ ಚಿತ್ರದ ನಾಯಕ. ಇದು ಅವರಿಗೆ ಮೊದಲ ಚಿತ್ರವೂ ಹೌದು. ನಟನೆಯ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ‘ಕೆಲವು ದೃಶ್ಯಗಳಲ್ಲಿ ನಿರ್ದೇಶಕರು ನನ್ನಿಂದ ಒಂದೂ ಸಂಭಾಷಣೆಯನ್ನು ಹೇಳಿಸಿಲ್ಲ. ಆಗ ನನಗೆ ಕೊಂಚ ಕಸಿವಿಸಿಯಾಗಿದ್ದು ನಿಜ. ಚಿತ್ರ ನೋಡಿದ ಬಳಿಕ ಅವರ ಸಾಮರ್ಥ್ಯದ ಬಗ್ಗೆ ನನಗೆ ಅರಿವಾಯಿತು’ ಎಂದು ಹೊಗಳಿದರು.

‘ಕೆಜಿಎಫ್‌’ ಚಿತ್ರದ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ‘ಬರವಣಿಗೆಯಲ್ಲಿ ಗೆದ್ದರೆ ಸಿನಿಮಾ ಗೆದ್ದಂತೆ. ಚಿತ್ರದಲ್ಲಿ ನನ್ನ ಕೆಲಸಕ್ಕೆ ಸಾಕಷ್ಟು ಅವಕಾಶವಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ತೃಪ್ತಿಯಿದೆ’ ಎಂದರು.

ಚಿತ್ರದಲ್ಲಿ ಆರು ಸಾಹಸ ದೃಶ್ಯಗಳಿದ್ದು, ಡಿಫರೆಂಟ್ ಡ್ಯಾನಿ ಸಂಯೋಜಿಸಿದ್ದಾರೆ. ಪ್ರಮೋದ್‌ ಅವರ ಛಾಯಾಗ್ರಹಣವಿದೆ.ಆಕಾಂಕ್ಷಾ ಈ ಚಿತ್ರದ ನಾಯಕಿ. ಕರಿಸುಬ್ಬು, ಕುರಿ ರಂಗ, ರಾಜೀವ್‌ ರೆಡ್ಡಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.