ADVERTISEMENT

‘ರಾಜ್ಯಭಾರ’ ಮಾಡುವವರ ಸಿನಿಮಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 9:46 IST
Last Updated 12 ಫೆಬ್ರುವರಿ 2022, 9:46 IST
‘ರಾಜ್ಯಭಾರ’ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ
‘ರಾಜ್ಯಭಾರ’ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ   

‘ರಾಜಧಾನಿ’ಯನಟ ರವಿತೇಜ ಈಗ ‘ರಾಜ್ಯಭಾರ’ ಮಾಡಲು ಹೊರಟಿದ್ದಾರೆ. ಎ.ಸಿ.ವೆಂಕಟೇಶ್ ಅವರು ನಿರ್ಮಿಸುತ್ತಿರುವ ‌ಈ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚೆಗೆ ನೆರವೇರಿತು.ರಾಜೇಶ್ ಗುರೂಜಿ ಅವರು ಶೀರ್ಷಿಕೆ ಬಿಡುಗಡೆ ಮಾಡಿದರು. ಆರ್.ಕಾರ್ತೀಕ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ರವಿತೇಜ, ಅರ್ವ, ಸನತ್, ಕಲ್ಯಾಣ್, ಅಕ್ಷಯ್, ಉಷಾಭಂಡಾರಿ, ಸೋನು, ಶಿವು ಮುಂತಾದವರು ತಾರಾಗಣದಲ್ಲಿದ್ದಾರೆ.

ನಾಯಕನಟ ರವಿತೇಜ ಮಾತನಾಡಿ, ‘ಎಲ್ಲಾ ಕಡೆ ತಮ್ಮದೇ ಹವಾ, ದರ್ಬಾರ್ ನಡೀಬೇಕು ಎಂದುಕೊಂಡಿದ್ದ ನಾಲ್ವರು ಹುಡುಗರ ಕಥೆಯಿದು. ‘ರಾಜಧಾನಿ’ ಚಿತ್ರದ ಇನ್ನೊಂದು ವರ್ಷನ್ ಎನ್ನಬಹುದು, ನಾಲ್ಕು ಜನ ಹುಡುಗರು ಒಂದು ಕೆಟ್ಟ ಪರಿಸ್ಥಿತಿಯಲ್ಲಿ ಕೆಟ್ಟ ದಾರಿಯಲ್ಲಿ ನಡೆದಾಗ ಅದರ ಪರಿಣಾಮವನ್ನು ಇಡಿ ಕುಟುಂಬವೇ ಎದುರಿಸಬೇಕಾಗುತ್ತದೆ. ಅವರು ಒಳ್ಳೇ ದಾರಿಯಲ್ಲಿ ಹೋಗಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವುದೇ ಈ ಚಿತ್ರದ ಕಥೆ. ಎಲ್ಲಾ ವಯಸ್ಸಿನ ಹುಡುಗರಿಗೂ ನನ್ನದೇ ಹವಾ ನಡೆಯಬೇಕು ಎಂದಿರುತ್ತದೆ. ಹಾಗೇ ಈ 4 ಜನ ಹುಡುಗರು ದರ್ಬಾರ್ ನಡೆಸಲು ಹೋಗುತ್ತಾರೆ. ಈ ವಿಷಯವನ್ನು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ’ ಎಂದರು.

ನಿರ್ದೇಶಕ ಆರ್. ಕಾರ್ತೀಕ್‌ ಮಾತನಾಡಿ, ‘ಇವತ್ತು ನಾನಿಲ್ಲಿರಲು ನನ್ನ ಭಾವ ರವಿತೇಜ ಕಾರಣ. ಒಂದೊಳ್ಳೆ ಕಥೆ ಮಾಡಿಕೊಂಡು ರಾಜ್ಯಭಾರ ಎನ್ನುವ ಸಿನಿಮಾ ನಿರ್ಮಿಸಲು ಹೊರಟಿದ್ದೇವೆ. ಬರುವ ಏಪ್ರಿಲ್‌ ಎರಡನೇ ವಾರ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದೇವೆ. ರವಿತೇಜ, ಉಷಾ ಭಂಡಾರಿ, ಅರವ್, ಅಂಜಲಿ, ಸೋನು, ಸನತ್ ಅಕ್ಷಯ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಪ್ರಮುಖ ಪಾತ್ರವೊಂದರಲ್ಲಿ ದೊಡ್ಡ ಕಲಾವಿದರೊಬ್ಬರು ನಟಿಸುತ್ತಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ವೆಂಕಟೇಶ್ ಮಾತನಾಡಿ, ‘ಸುಮ್ಮನೆ ಮಾತಾಡುತ್ತಿರುವಾಗ ಹುಟ್ಟಿದ ಕಥೆಯಿದು. ನಾವೆಲ್ಲ ಪ್ರತಿದಿನ ನೋಡುತ್ತಿರುವ ಘಟನೆಗಳೇ ಇದರಲ್ಲಿರುತ್ತವೆ. ರಾಜಕಾರಣಿಗಳು ಸಾಮಾನ್ಯ ಮನುಷ್ಯರನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು ಅವರನ್ನು ಹೇಗೆ ಹಾಳು ಮಾಡುತ್ತಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ.‌ ಚಿತ್ರದಲ್ಲಿ ನಾನೂ ಒಂದು ಪಾತ್ರ ಮಾಡುತ್ತಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.