ADVERTISEMENT

ಫೆಬ್ರುವರಿಗೆ ‘ಬಟರ್‌ ಫ್ಲೈ’ ಹಾರಾಟ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:45 IST
Last Updated 27 ಡಿಸೆಂಬರ್ 2018, 19:45 IST
ರಮೇಶ್‌ ಅರವಿಂದ್‌
ರಮೇಶ್‌ ಅರವಿಂದ್‌   

‘ಈ ವರ್ಷದಲ್ಲಿ ನಾನು ಸಾಕಷ್ಟು ಬ್ಯುಸಿಯಾಗಿದ್ದೆ. ನನಗೆ ಈ ವರ್ಷ ಸಾಕಷ್ಟು ಖುಷಿ ಕೊಟ್ಟಿದೆ’ ಎಂದು ಮಾತು ಆರಂಭಿಸಿದರು ನಟ ರಮೇಶ್ ಅರವಿಂದ್‌.‌

‘ಬಟರ್ ಫ್ಲೈ’ ಚಿತ್ರದಲ್ಲಿ ಬ್ಯುಸಿಯಾಗಿದ್ದ ಅವರು ದಿಢೀರ್‌ ಆಗಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾಗಿ ಈ ವರ್ಷ ತಮ್ಮ ವೃತ್ತಿಬದುಕಿನಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿದರು.

‘ಎರಡು ಭಾಷೆಯಲ್ಲಿ ಚಿತ್ರ ನಿರ್ದೇಶನ ಮಾಡಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಟ್ಟೆ. ಭೈರದೇವಿ ಚಿತ್ರದಲ್ಲಿ ನಟಿಸಿದೆ. ಸಾಕಷ್ಟು ಹೊಸ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಅಂತೂ ವರ್ಷ ಪೂರ್ತಿ ಬ್ಯುಸಿಯಾಗಿದ್ದೆ’ ಎಂದು ನಕ್ಕರು.

ADVERTISEMENT

‘ಬಟರ್ ಫ್ಲೈ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರುವರಿಯಲ್ಲಿ ಪಾತರಗಿತ್ತಿಯ ಹಾರಾಟವನ್ನೂ ನಿರೀಕ್ಷಿಸಬಹುದು. ಕನ್ನಡದಲ್ಲಿ ಪಾರುಲ್‍ ಯಾದವ್ ಮತ್ತು ತೆಲುಗಿನಲ್ಲಿ ಕಾಜಲ್‍ ಅಗರವಾಲ್ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಇಬ್ಬರ ಯೋಚನೆಗಳನ್ನೂ ಬಳಸಿಕೊಂಡಿದ್ದೇನೆ’ ಎಂದರು ರಮೇಶ್‌.

‘ಆಯಾ ಭಾಷೆಯ ಗಾಯಕರು ಹಾಡಿದ ಗೀತೆಯನ್ನು ಕೇಳಿದಾಗ ಖುಷಿ ಕೊಟ್ಟಿತು. ಈ ಚಿತ್ರದ ಫಲಿತಾಂಶ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ. ಎಂದಿನಂತೆ ನಟನೆಯನ್ನು ಮುಂದುವರಿಸುತ್ತೇನೆ ಎಂದರು.

ಕೃತಕವಲ್ಲದ ಹಿಟ್ ಚಿತ್ರ ನೀಡುವ ಬಯಕೆ ಅವರಿಗಿದೆಯಂತೆ. ‘ಆಪ್ತಮಿತ್ರ, ರಾಮ ಶಾಮ ಭಾಮದಂತಹ ಸಿನಿಮಾ ಮಾಡಬೇಕು. ನೋಡುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು. ಸ್ಟಾರ್‌ನಟರಿಗಾಗಿಯೇ ಕತೆ ಸಿದ್ಧಪಡಿಸಿಕೊಂಡಿಲ್ಲ. ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಚಿತ್ರ ಮಾಡಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ನನ್ನದೇ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿ, ಕಲಾವಿದರ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ರಾಧಿಕಾ ಚೇತನ್ ಅವರೊಂದಿಗೆ ನಟಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಂದುವರಿದ ಭಾಗ ಬರಲಿದೆ’ ಎಂದು ಸುಳಿವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.