ADVERTISEMENT

‘ಹಾಸ್ಟೆಲ್‌ ಹುಡುಗರಿಗೆ’ ಸಂಕಷ್ಟ: ₹1 ಕೋಟಿ ಪರಿಹಾರ ಕೇಳಿದ ರಮ್ಯಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 19:49 IST
Last Updated 19 ಜುಲೈ 2023, 19:49 IST
ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದ ದೃಶ್ಯ
ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದ ದೃಶ್ಯ   

ಬೆಂಗಳೂರು: ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ನಟಿ ರಮ್ಯಾ ವಕೀಲರ ಮೂಲಕ ನೋಟಿಸ್‌ ನೀಡಿದ್ದಾರೆ.

‘ಚಿತ್ರದ ಟ್ರೇಲರ್‌ನಲ್ಲಿ ನನ್ನ ಅನುಮತಿಯಿಲ್ಲದೆ ನಾನಿರುವ ದೃಶ್ಯಗಳನ್ನು ಚಿತ್ರತಂಡ ಬಳಸಿಕೊಂಡಿದೆ. ಕೇವಲ ಪ್ರಚಾರದ ವಿಡಿಯೊದಲ್ಲಿ ಮಾತ್ರ ಕಾಣಿಸಿಕೊಳ್ಳಲು ಚಿತ್ರತಂಡ ಒಪ್ಪಂದ ಮಾಡಿಕೊಂಡಿತ್ತು. ಅದನ್ನು ಉಲ್ಲಂಘಿಸಿ ನನ್ನನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಇದರಿಂದ ನನಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ನಾನಿರುವ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಪ್ರಚಾರದ ಸರಕುಗಳನ್ನು ತೆಗೆದು ಹಾಕಬೇಕು. ₹1 ಕೋಟಿ ರೂಪಾಯಿ ಪರಿಹಾರ ನೀಡಬೇಕು’ ಎಂದು ರಮ್ಯಾ ಒತ್ತಾಯಿಸಿದ್ದಾರೆ. 

ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿ ರಮ್ಯಾ ಅಭಿನಯಿಸಿದ್ದಾರೆ. ರಮ್ಯಾ ಅಭಿನಯಿಸುತ್ತಿದ್ದಾರೆ ಎಂಬ ಪ್ರಚಾರದ ಅದ್ದೂರಿ ವಿಡಿಯೊವನ್ನು ಕೂಡ ಚಿತ್ರತಂಡ ಮಾಡಿತ್ತು. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದು, ಅದರಲ್ಲಿಯೂ ರಮ್ಯಾ ಪಾಠ ಮಾಡುತ್ತಿರುವ ದೃಶ್ಯವಿತ್ತು. 

ADVERTISEMENT

ಜುಲೈ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಈ ಹಠಾತ್‌ ಬೆಳವಣಿಗೆಯಿಂದ ಗುರುವಾರ ಆಯೋಜಿಸಲಾಗಿದ್ದ ಚಿತ್ರದ ಪ್ರೀಮಿಯರ್‌ ಶೋ ರದ್ದಾಗಿದೆ. ‘ಇ–ಮೇಲ್‌ ಮೂಲಕ ನೋಟಿಸ್‌ ಕಳುಹಿಸಲಾಗಿದೆ. ಆದರೆ ಚಿತ್ರತಂಡಕ್ಕೆ ಅದರ ಪ್ರತಿ ಸಿಕ್ಕಿಲ್ಲ’ ಎಂದು ಚಿತ್ರತಂಡದ ಮೂಲಗಳು ಹೇಳಿವೆ. ಚಿತ್ರದ ನಿರ್ದೇಶಕರು ಮತ್ತು ನಟಿ ರಮ್ಯಾ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯೆಗೆ ಸಿಕ್ಕಿಲ್ಲ. 

ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್‌ ಈ ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶಕರು. ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ ಮತ್ತು ಗೆಳೆಯರು ಈ ಚಿತ್ರದ ನಿರ್ಮಾಪಕರು. ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.