ಹೈದರಾಬಾದ್: ಕೆಲವು ಆ್ಯಪ್‌ಗಳಿಂದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ನಟ ರಾಣಾ ದಗ್ಗುಬಾಟಿ ಗೈರಾಗಿದ್ದು, ವಿಚಾರಣೆಗೆ ಆಗಸ್ಟ್ 11ರ ಹೊಸ ದಿನಾಂಕವನ್ನು ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿಚಾರಣೆ ಮುಂದೂಡಲು ನಟ ಮನವಿ ಮಾಡಿದ್ದರು. ಹಾಗಾಗಿ, ಆಗಸ್ಟ್ 11ಕ್ಕೆ ಹೊಸ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಕಳೆದ ವಾರ 4 ನಟರಿಗೆ ಬೇರೆ ಬೇರೆ ದಿನಾಂಕಗಳಂದು ಸಮನ್ಸ್ ಜಾರಿ ಮಾಡಿತ್ತು.
ನಟ ಪ್ರಕಾಶ್ ರಾಜ್ ಅವರಿಗೆ ಜುಲೈ 30ರಂದು, ವಿಜಯ್ ದೇವರಕೊಂಡಗೆ ಆಗಸ್ಟ್ 6 ರಂದು ಮತ್ತು ಲಕ್ಷ್ಮಿ ಮಂಚು ಅವರಿಗೆ ಆಗಸ್ಟ್ 13ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಒಟ್ಟು 28 ನಟರು, ಸೆಲೆಬ್ರಿಟಿಗಳು, ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ಗಳು ಮತ್ತು ಈ ಅಪ್ಲಿಕೇಶನ್‌ಗಳ ನಿರ್ವಹಣಾ ಸಿಬ್ಬಂದಿಯ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿದೆ.
ಅಕ್ರಮ ಹಣ ಗಳಿಕೆಯ ಉದ್ದೇಶದಿಂದ ಸೃಜಿಸಲಾಗಿದ್ದ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪರ ಪ್ರಚಾರ ಮಾಡಿದ್ದಕ್ಕಾಗಿ ನಟರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ನಟರಿಂದ ಇ.ಡಿ ಹೇಳಿಕೆ ದಾಖಲಿಸಿಕೊಳ್ಳಲಿದೆ.
ತೆಲಂಗಾಣ ಪೊಲೀಸರು ದಾಖಲಿಸಿರುವ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ಈ ಪ್ರಕರಣ ದಾಖಲಿಸಿಕೊಂಡಿದೆ.
*********************************
ಬಿಎಂಟಿಸಿ ಬಸ್‌ನಿಲ್ದಾಣದಲ್ಲಿರುವ ಶೌಚಾಲಯದ ಬ್ಯಾಗ್‌ನಲ್ಲಿ ಜಿಲೆಟಿನ್ ಕಡ್ಡಿಗಳು
ಕಲಾಸಿಪಾಳ್ಯದ ಬಿಎಂಟಿಸಿ ಬಸ್‌ನಿಲ್ದಾಣದ ಬಳಿ ಸ್ಫೋಟಕ ವಸ್ತುಗಳು ಪತ್ತೆ
ಬೆಂಗಳೂರು: ನಗರದ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಬಳಿ ಇಡಲಾಗಿದ್ದ ಬ್ಯಾಗ್‌ವೊಂದರಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾಗಿದೆ. ಸ್ಥಳಕ್ಕೆ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಬಾಂಬ್ ತಪಾಸಣೆ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.