ADVERTISEMENT

ಸಿನಿಮಾ ವಿಮರ್ಶೆ: ಗೂಬೆಯ ಆರ್ತನಾದ ಅರಸುತ್ತಾ ಹೊರಟ ‘ರಾಂಧವ’

ಕೆ.ಎಂ.ಸಂತೋಷ್‌ ಕುಮಾರ್‌
Published 24 ಆಗಸ್ಟ್ 2019, 6:49 IST
Last Updated 24 ಆಗಸ್ಟ್ 2019, 6:49 IST
ರಾಂಧವ ಚಿತ್ರದಲ್ಲಿ ಭುವನ್‌ ಪೊನ್ನಣ್ಣ
ರಾಂಧವ ಚಿತ್ರದಲ್ಲಿ ಭುವನ್‌ ಪೊನ್ನಣ್ಣ   

ಸಿನಿಮಾ: ರಾಂಧವ

ನಿರ್ಮಾಣ: ಸನತ್‍ಕುಮಾರ್ ಎಸ್.ಆರ್.

ನಿರ್ದೇಶನ: ಸುನೀಲ್‌ ಎಸ್‌. ಆಚಾರ್ಯ

ADVERTISEMENT

ತಾರಾಗಣ: ಭುವನ್ ಪೊನ್ನಣ್ಣ, ಅಪೂರ್ವಾ ಶ್ರೀನಿವಾಸ್‌, ಶ್ರೀಯಾ ಅಂಚನ್‌, ಅರವಿಂದ್‌, ಎಂ.ಎಸ್‌. ಜಹಾಂಗೀರ್‌

ಆತನ ಹೆಸರು ರಾಬರ್ಟ್‌. ಚರ್ಚ್‌ನ ಫಾದರ್‌ ಬಳಿ ಬೆಳೆಯುವ ಆತ ಪಕ್ಷಿ ತಜ್ಞ. ಅಪರೂಪ ಪ್ರಭೇದದ ಗೂಬೆಯ ಕೂಗನ್ನು ಸಾಕ್ಷ್ಯಚಿತ್ರಕ್ಕೆ ದಾಖಲಿಸಿಕೊಳ್ಳಲು ಹುಡುಕಾಟದಲ್ಲಿರುತ್ತಾನೆ. ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡು, ಆ ಗೂಬೆಯ ಜಾಡು ಅರಸಿ ಹೊರಡುತ್ತಾನೆ. ಆತ ಹೊರಟಿದ್ದಾರೂ ಎಲ್ಲಿಗೆ? ನಿಜವಾಗಿಯೂ ಗೂಬೆಯ ಕೂಗು ದಾಖಲಿಸಿಕೊಳ್ಳಲೇ ಅಥವಾ ಶಾಪಗ್ರಸ್ತನಾಗಿರುವುದಕ್ಕೆ ಸೇಡು ತೀರಿಸಿಕೊಳ್ಳಲೇ? ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಶುರುವಾಗುತ್ತದೆ ‘ರಾಂಧವ’ ಚಿತ್ರದ ಕಥೆ.

ಈ ಪ್ರಶ್ನೆಗಳಿಗೆ ಉತ್ತರವಾಗಿ ಕಥೆಯೊಳಗೊಂದು ಕಥೆ, ಆ ಕಥೆಗೊಂದು ಉಪ ಕಥೆ ಪೋಣಿಸಿ ಪ್ರೇಕ್ಷಕರ ಕುತೂಹಲ ತಣಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುನೀಲ್‌ ಎಸ್‌. ಆಚಾರ್ಯ.

ಆರಂಭದಲ್ಲಿ ಇದೊಂದು ದೆವ್ವದ ಕಥೆಯಾ? ಸಸ್ಪೆನ್ಸ್‌. ಥ್ರಿಲ್ಲರ್‌ ಕಥೆಯಾ ಅಥವಾ ಪ್ರೇಮ ಕಥೆಯಾ? ಎನ್ನುವ ಗೊಂದಲ ಮೂಡುತ್ತದೆ. ಮೊದಲಾರ್ಧದಲ್ಲಿ ಸಂಭಾಷಣೆಗಳು ಬರೀ ಸ್ವಗತ ರೂಪದಲ್ಲಿ ನೀರಸವಾಗಿವೆ.

ಗೂಬೆ ಹುಡುಕಿಕೊಂಡು ಹೊರಡುವ ನಾಯಕನನ್ನು ಗೂಬೆಯಂತೆಕುಳಿತುಕೊಂಡು ನೋಡಬೇಕಾ ಎನ್ನುವ ಪ್ರಶ್ನೆ ಮನಸಿನಲ್ಲಿ ಹುಟ್ಟುವಷ್ಟರಲ್ಲಿ, ಕಥೆಯ ಕುತೂಹಲದ ಗಂಟು ಬಿಚ್ಚಿಕೊಳ್ಳುತ್ತದೆ. ಮಧ್ಯಂತರ ಸಮಯ ಕಳೆದದ್ದು ಅರಿವಿಗೆ ಬಾರದೆ ಸಿನಿಮಾ ಮುಗಿದು ಹೋಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲೂಕುತೂಹಲ ಇದೆ. ಅಷ್ಟರಮಟ್ಟಿಗೆ ನಿರ್ದೇಶಕರಜಾಣ್ಮೆ ಮೆಚ್ಚುಗೆ ಗಿಟ್ಟಿಸುತ್ತದೆ.ಆದರೆ, ಸಿನಿಮಾದ ಕಥೆ ಏನನ್ನು ಧ್ವನಿಸುತ್ತದೆ ಎಂದು ಮಾತ್ರ ಕೇಳಬೇಡಿ. ‘ಸೇಡಿಗೆ ಸೇಡೇ ಮದ್ದು’ ಎನ್ನುವ ಕಾಲಕ್ಕೆ ತಕ್ಕಂತೆ ಕಥೆ ಪೋಣಿಸಿ, ಪ್ರೇಕ್ಷಕರ ಮುಂದಿಟ್ಟಿದ್ದಾರೆ.ಕಥೆಗೆ ತಳಬುಡ ಹುಡುಕುವಾಗ ‘ರಾಂಧವ’ನ ಸಮರ್ಥನೆಗಳಿಂದಷ್ಟೇ ಪ್ರೇಕ್ಷಕರ ಗೊಂದಲ ನಿವಾರಣೆಯಾಗುತ್ತದೆ.

ಬಿಗ್‌ಬಾಸ್‌ ಮನೆಯಿಂದ ಬಣ್ಣದ ಲೋಕಕ್ಕೆ ಧುಮುಕಿದ ಭುವನ್‌ ಪೊನ್ನಣ್ಣ ಎರಡು ಭಿನ್ನ ಶೇಡ್‌ಗಳ ಪಾತ್ರದಲ್ಲಿ ಭರವಸೆ ಮೂಡಿಸುತ್ತಾರೆ. ನಾಯಕಿಯರಾದ ಅಪೂರ್ವಾಶ್ರೀನಿವಾಸ್‌ ಮತ್ತು ಶ್ರೀಯಾ ಅಂಚನ್‌ಪಾತ್ರಗಳು ಅಷ್ಟಾಗಿ ಮನಸಿಗೆ ನಾಟುವುದಿಲ್ಲ.

ಮನರಂಜನೆಯ ಭೂರಿಭೋಜನ ಸವಿಯುವ ಆಸೆ ಇಟ್ಟುಕೊಂಡರೆ ನಿರಾಸೆಯಾದಿತು. ಎಂ.ಎಸ್‌. ಜಹಾಂಗೀರ್‌ ಹಾಸ್ಯವೆಂದು ಪುಂಖಾನುಪುಂಖವಾಗಿ ಬಿಡುವಸಂಭಾಷಣೆಗಳಲ್ಲಿ ಹಾಸ್ಯರಸ ಉಕ್ಕುವುದಿಲ್ಲ. ಅರವಿಂದ್ ರಾವ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ರಾಜಶಿವಶಂಕರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ. ಸಂಕಲನ ಬಿಗಿಯಾಗಿದ್ದರೆ ಪ್ರೇಕ್ಷಕರ ಪ್ರಯಾಸ ತಪ್ಪಿಸಬಹುದಿತ್ತು. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಮತ್ತು ಶಶಾಂಕ್‌ ಶೇಷಗಿರಿ ಸಂಗೀತ ನಿರ್ದೇಶನದ ಎರಡು ಹಾಡುಗಳು ಕೇಳುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.