ADVERTISEMENT

ರಂಗಮಂದಿರದಲ್ಲಿ ಕೌಟುಂಬಿಕ ನಾಟಕ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 11:36 IST
Last Updated 13 ಅಕ್ಟೋಬರ್ 2018, 11:36 IST
ಪ್ರವೀಣ್ ತೇಜ್, ಆಶಿಕಾ ರಂಗನಾಥ್, ಅವಿನಾಶ್, ಅನುಪ ಮಾ ಗೌಡ
ಪ್ರವೀಣ್ ತೇಜ್, ಆಶಿಕಾ ರಂಗನಾಥ್, ಅವಿನಾಶ್, ಅನುಪ ಮಾ ಗೌಡ   

‘‘ಜಗವೇ ಒಂದು ನಾಟಕರಂಗ’ ಎಂದು ಕವಿ ಷೇಕ್ಸ್‌ಪಿಯರ್ ಎಂದೋ ಹೇಳಿದ್ದಾನೆ. ನಾವು ಬದುಕಿನಲ್ಲಿ ತುಂಬ ಜನರು ಬಂದು ಹೋಗುತ್ತಾರೆ. ಬಸ್ಸಿನಲ್ಲಿ, ದಾರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಾಮ್ಮ ಸುತ್ತಮುತ್ತಲೂ ಎಷ್ಟೊಂದು ಜನ ಇರುತ್ತಾರೆ. ಆದರೆ ಅವರಲ್ಲಿ ನಮಗೆ ಪರಿಚಿತರಾಗುವವರು ಎಷ್ಟು ಜನ?’’ ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡೇ ಮಾತಿಗೆ ಶುರುವಿಟ್ಟುಕೊಂಡರು ನಿರ್ದೇಶಕ ಶಾಹುರಾಜ್ ಶಿಂದೆ. ಹಿಂದೆ ‘ಸ್ನೇಹನಾ ಪ್ರೀತಿನಾ?’ ಸಿನಿಮಾ ಮಾಡಿದ್ದ ಅವರು ಇದೀಗ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಎರಡು ಕುಟುಂಬಗಳ ನಡುವೆ ನಡೆಯುವ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ.

ಇತ್ತೀಚೆಗೆ ಯಲಹಂಕದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಮದನ್‌ ಸಿ.‍ಪಿ. ವಿನ್ಯಾಸ ಮಾಡಿದ್ದ ಚಿತ್ರದ ಪೋಸ್ಟರ್‌ ಕೂಡ ಗಮನಸೆಳೆಯುವ ಹಾಗಿತ್ತು.

ಕಿರುತೆರೆ ನಟ ಪ್ರವೀಣ್ ತೇಜ್‌ ಈ ಚಿತ್ರದಲ್ಲಿ ತಂದೆಯ ಅತಿಶಿಸ್ತಿನಿಂದ ಒದ್ದಾಡುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.ಆಶು ಬೇದ್ರೆ ಈ ಚಿತ್ರದ ನಾಯಕ. ತಬಲಾನಾಣಿ ಅವರ ತಂದೆಯಾಗಿ ನಟಿಸಿದ್ದಾರೆ. ತಾಯಿಯಾಗಿ ವೀಣಾ ಸುಂದರ್ ಕಾಣಿಸಿಕೊಂಡಿದ್ದಾರೆ. ಶ್ರುತಿ ಪ್ರಕಾಶ್ ಮತ್ತು ಅನುಪಮಾ ಇಬ್ಬರೂ ಪ್ರವೀಣ್ ತೇಜ್‌ಗೆ ಜತೆಯಾಗಿ ನಟಿಸುತ್ತಿದ್ದಾರೆ. ಆಶುಬೇದ್ರೆ ಅವರ ಪ್ರೇಯಸಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ.

ADVERTISEMENT

‘ಈ ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಸಂಪ್ರದಾಯಸ್ತ ಕುಟುಂಬದಿಂದ ಬಂದ ಹೆಣ್ಣುಮಗಳ ಪಾತ್ರ. ಆದರೆ ಅವಳು ಮಹಾ ತುಂಟಿ. ಎಲ್ಲರನ್ನೂ ತನ್ನ ಬೆರಳ ತುದಿಯಲ್ಲಿ ಆಡಿಸುವವಳು. ಸಖತ್ ಬೋಲ್ಡ್‌ ಆಗಿರುತ್ತಾಳೆ. ಮನೆಯಲ್ಲಿನ ಅತಿಯಾದ ಶಿಸ್ತಿಗೆ ವಿರುದ್ಧವಾದ ಸ್ವಭಾವ ಅವಳದು. ಅಂಥ ಹುಡುಗಿಗೆ ಒಬ್ಬ ಪೊರ್ಕಿ ಹುಡುಗನ ಜತೆಯಲ್ಲಿ ಪ್ರೇಮವಾದಾಗ ಏನಾಗುತ್ತದೆ ಎನ್ನುವುದೇ ಕಥೆ’ ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಆಶಿಕಾ.

ಸುಮನ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅವಿನಾಶ್ ರಾಜಕಾರಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರ ಚುರುಕು ಸಂಭಾಷಣೆ ಈ ಚಿತ್ರಕ್ಕೆ ಇರಲಿದೆ. ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಸಿನಿಮಾದ ಕಥೆ ರಮೇಶ್ ಕುಮಾರ್ ಅವರದು.

‘ರಂಗಮಂದಿರ’ದಲ್ಲಿ ಸುಮಾರು ಎಂಬತ್ತು ಕಲಾವಿದರು ನಟಿಸುತ್ತಿದ್ದಾರೆ. ರಂಗಾಯಣ ರಘು, ಮೈಕೋ ನಾಗರಾಜ್, ವಿಜಯ ಚೆಂಡೂರ, ವೀಣಾ ಸುಂದರ್, ಅರುಣಾ ಬಾಲರಾಜ್, ಕಾರ್ತಿಕ್, ನಾಗೇಶ್, ರಾಜ್‌ ದೀಪಕ್ ಶೆಟ್ಟಿ, ರಾಕ್‌ಲೈನ್‌ ಸುಧಾಕರ್ ಮುಂತಾದವರು ಚಿತ್ರಭೂಮಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.