ADVERTISEMENT

ಮಹಿಳಾ ಅಭಿಮಾನಿ ಜತೆ ರಾನು ಮಂಡಲ್‌ ಕಿರಿಕ್‌!

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:35 IST
Last Updated 10 ನವೆಂಬರ್ 2019, 19:35 IST
ರಾನು ಮಂಡಲ್‌
ರಾನು ಮಂಡಲ್‌   

ರಾತ್ರೋರಾತ್ರಿ ಸ್ಟಾರ್‌ ಗಾಯಕಿಯಾದಇಂಟರ್‌ನೆಟ್‌ ಸೆನ್ಸೇಷನ್‌ ರಾನು ಮಂಡಲ್‌ ಈಗ ಸಾಮಾನ್ಯ ಹೆಣ್ಣು ಮಗಳಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಕೋಲ್ಕತ್ತದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನುಗೆ ಏಕಾಏಕಿ ಅದೃಷ್ಟದ ಬಾಗಿಲು ತೆರೆದು ಬಾಲಿವುಡ್‌ ಗಾಯಕಿಯಾದ ಕತೆ ಎಲ್ಲರಿಗೂ ಗೊತ್ತಿದೆ.

ಆದರೆ,ಸುದ್ದಿ ಅದಲ್ಲ. ಸೆಲ್ಫಿ ತೆಗೆಸಿಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಂದಿಗೆ ರಾನು ಮಂಡಲ್‌ ಧಿಮಾಕಿನಿಂದ ವರ್ತಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾನು ಭುಜವನ್ನು ಮುಟ್ಟಿ ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಂತೆಮಹಿಳಾ ಅಭಿಮಾನಿಮನವಿ ಮಾಡಿದ್ದಾರೆ.

ಇದರಿಂದ ಹಠಾತ್ತನೇ ಕೆರಳಿದ ರಾನು,ಮೈ ಮುಟ್ಟಿ ಮಾತನಾಡಿಸದಂತೆ ಮಹಿಳಾ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಯಾರು ನನ್ನ ಮೈ ಮುಟ್ಟಿದ್ದು? ಹೀಗೆ ಮೈ ತಟ್ಟಿ ಮಾತನಾಡಿಸುವುದರ ಅರ್ಥವೇನು? ಇದು ಸರಿಯಲ್ಲ’ ಎಂದು ಸಾರ್ವಜನಿಕವಾಗಿ ಕೂಗಾಡಿದ್ದಾರೆ. ಇಂತಹ ವರ್ತನೆ ನಿರೀಕ್ಷಿಸದ ಮಹಿಳೆ ನಸುನಗುತ್ತಾ ನನಗೆ ಅವಮಾನ ಮಾಡಬೇಕು ಎಂಬ ಭಾವನೆ ಇರಲಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಆದರೆ, ರಾನು ಅದನ್ನು ಕಿವಿಗೆ ಹಾಕಿಕೊಳ್ಳದೆ ಬೈದು ಅವಮಾನಿಸಿದ್ದಾರೆ.

ADVERTISEMENT

ಕೆಲವು ದಿನಗಳ ಹಿಂದೆ ರಾನು ಕಂಠಸಿರಿಗೆ ಮನಸೋತು ಶ್ಲಾಘಿಸಿದ್ದ ಆಕೆಯ ಸಾವಿರಾರು ಅಭಿಮಾನಿಗಳಿಗೆ ಈ ವರ್ತನೆಯಿಂದ ಬೇಸರವಾಗಿದೆ. ‘ಹಣ ಮತ್ತು ಕೀರ್ತಿಯ ಶನಿ ಹೆಗಲೇರಿದರೆ ಮನುಷ್ಯ ಹೇಗೆ ವರ್ತಿಸಬಹುದು ಎಂಬುವುದಕ್ಕೆ ರಾನು ತಾಜಾ ಉದಾಹರಣೆ‘ ‘ಕೆಲವು ದಿನಗಳ ಹಿಂದೆ ರೈಲ್ವೆ ಫ್ಲಾಟ್‌ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದದ್ದನ್ನು ಆಕೆ ಮರೆತಂತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಡಿಶಾದ ಹಾಸ್ಯ ನಟ ಪಪ್ಪು ಪಾಂಪಾಂ ಕೆಲವು ದಿನಗಳ ಹಿಂದೆ ರಾನು ಮಂಡಲ್‌ ಅವರನ್ನುಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದಾಗ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದರು. ರಾನು ಬೆಂಬಲಕ್ಕೆ ನಿಂತಿದ್ದ ಅಭಿಮಾನಿಗಳು ಪಪ್ಪು ಪಾಂಪಾಂ ಬೆಷರತ್‌ ಬೆಂಬಲಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ನಟ ಕ್ಷಮೆಯಾಚಿಸಿದ್ದ. ಈಗ ಅದೇ ಅಭಿಮಾನಿಗಳು ಇಂಟರ್‌ನೆಟ್‌ ಸೆನ್ಸೇಷನ್‌ ಚಳಿ ಬಿಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.