ADVERTISEMENT

ರತ್ನಮಂಜರಿಯ ಅಸ್ತವ್ಯಸ್ತ ಪುರಾಣ

ಕೆ.ಎಚ್.ಓಬಳೇಶ್
Published 17 ಮೇ 2019, 11:24 IST
Last Updated 17 ಮೇ 2019, 11:24 IST
‘ರತ್ನಮಂಜರಿ’ ಚಿತ್ರದಲ್ಲಿ ರಾಜ್‌ ಚರಣ್‌ ಮತ್ತು ಅಖಿಲಾ ಪ್ರಕಾಶ್‌
‘ರತ್ನಮಂಜರಿ’ ಚಿತ್ರದಲ್ಲಿ ರಾಜ್‌ ಚರಣ್‌ ಮತ್ತು ಅಖಿಲಾ ಪ್ರಕಾಶ್‌   

ಸಿನಿಮಾಗಳು ನೋಡುಗರಲ್ಲಿ ಒಂದು ಬಗೆಯ ದೆವ್ವದ ಕಲ್ಪನೆ ಮೂಡಿಸಿವೆ. ಮಹಿಳೆಯೇ ಗೆಜ್ಜೆ ಸದ್ದು ಮಾಡುತ್ತಾ ಕಾಟ ಕೊಡುವುದು ಸಾಮಾನ್ಯ. ಅದರಲ್ಲೂ ಆಕೆಗೆ ಕಗ್ಗತ್ತಲಿನಲ್ಲಿ ದಟ್ಟ ಕಾಡಿನಲ್ಲಿರುವ ಒಂಟಿ ಬಂಗಲೆ ಸುತ್ತುವುದು ಅನಿವಾರ್ಯ. ಆ ಸದ್ದು ಹಿಂಬಾಲಿಸುವುದು ನಾಯಕನ ಕಾಯಕ. ಎದೆ ನಡುಗಿಸುವ ಕರ್ಕಶ ಕೂಗಿನ ಹಿಂದಿರುವುದು ಪಟ್ಟಭದ್ರ ಶಕ್ತಿಗಳ ಕೈವಾಡ. ನಿರ್ದೇಶಕ ಪ್ರಸಿದ್ಧ್‌ ಗಾಂಧಿನಗರದ ಈ ಹಳೆಯ ಸೂತ್ರ ಬಳಸಿಕೊಂಡೇ ‘ರತ್ನಮಂಜರಿ’ ಚಿತ್ರದಲ್ಲಿ ಮರ್ಡರ್ ಮಿಸ್ಟರಿ ಕಥೆ ಹೇಳಿದ್ದಾರೆ.

ಕಥೆ ಶುರುವಾಗುವುದು ಅಮೆರಿಕದ ಕಾರ್ಪೋರೇಟ್‌ ಜಗತ್ತಿನ ಕೃತಕ ಪರಿಸರದಲ್ಲಿ. ಅಲ್ಲಿಂದ ಕೊಡಗಿನ ಕಾನನದ ದಾರಿಗೆ ಜಿಗಿಯುತ್ತದೆ. ಆದರೆ, ಅದನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕರು ಆಯ್ದುಕೊಂಡಿರುವ ಹಾದಿ, ಪಾತ್ರಗಳು, ಸಂಭಾಷಣೆಗಳು ಕೃತಕವಾಗಿವೆ. ಹಾಗಾಗಿ ಪಾತ್ರಗಳು, ಡೈಲಾಗ್‌ಗಳು, ಭಾವುಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ನಾಟುವುದಿಲ್ಲ.

ಚಿತ್ರದ ಮೊದಲಾರ್ಧ ನಾಯಕ ಮತ್ತು ನಾಯಕಿ ನಡುವಿನ ಪ್ರೇಮದಾಟದ ನಡುವೆಯೇ ಮುಗಿದು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ನಿರ್ದೇಶಕರು ಕಥೆಗೆ ಹಾರರ್‌ ಲೇಪನ ಹಚ್ಚಿದ್ದಾರೆ. ಈ ಸನ್ನಿವೇಶಗಳಲ್ಲೂ ಹೊಸದೇನೂ ಕಾಣುವುದಿಲ್ಲ. ದೆವ್ವದ ಸನ್ನಿವೇಶಗಳಿಗೆ ಹೆಚ್ಚಿನ ಪಾಲು ಮೀಸಲಿಟ್ಟಿರುವ ಪರಿಣಾಮ ಈ ಲೇಪನವೂ ತೆಳುವಾಗಿದೆ.

ADVERTISEMENT

ಮರಗಳಿಗೂ ಜೀವವಿದೆ ಎಂದು ಬಾಲ್ಯದಿಂದಲೇ ಅವುಗಳ ಮೇಲೆ ಅಗಾಧವಾದ ಪ್ರೀತಿ ಬೆಳೆಸಿಕೊಂಡ ಹುಡುಗನೊಬ್ಬ ಕೊನೆಯಲ್ಲಿ ಕ್ರೂರತನ ಮೆರೆಯುವುದು ಅಸಹಜವಾಗಿದೆ. ಮನುಷ್ಯ ಸಂಬಂಧಗಳನ್ನು ಸಾಂದ್ರವಾಗಿಸುವುದಕ್ಕಿಂತ ನಿರ್ದೇಶಕರು ಕ್ರೌರ್ಯವನ್ನೇ ಪ್ರಧಾನವಾಗಿಸಿ ತೋರಿಸುವುದು ಹೆಚ್ಚು ನಾಟಕೀಯವಾಗಿದೆ. ಇದಕ್ಕೆ ಕಾಮ, ಕೌಟುಂಬಿಕ ದ್ವೇಷದ ನೆಪವನ್ನೂ ಬೆರೆಸಿದ್ದಾರೆ.

ಖಳ ನಟನ ಸಾವಿನೊಂದಿಗೆ ಸಿನಿಮಾ ಮುಗಿಯಿತು ಎಂದು ತಿಳಿದು ಚಿತ್ರಮಂದಿರದಿಂದ ಹೊರಟಲು ಸಜ್ಜಾದ ಪ್ರೇಕ್ಷಕರಿಗೆ ನಿರ್ದೇಶಕರು ಮತ್ತೊಂದು ಹಾಡು ತೋರಿಸಲು ಮುಂದಾಗುವುದು ಇನ್ನೊಂದು ತಮಾಷೆ.

ಸಿದ್ಧಾರ್ಥ್‌ ಸಸ್ಯಶಾಸ್ತ್ರಜ್ಞ. ಅಮೆರಿಕದಲ್ಲಿ ಅವನ ವಾಸ. ಫ್ಯಾಷನ್‌ ಡಿಸೈನರ್‌ ಗೌರಿ ಜೊತೆಗೆ ಆತನ ವಿವಾಹವಾಗುತ್ತದೆ. ಅವರ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ಪಂಡಿತ್‌ ನಾಣಯ್ಯ ದಂಪತಿ ಇರುತ್ತಾರೆ. ಒಂದು ದಿನ ಆ ದಂಪತಿ ನಿಗೂಢವಾಗಿ ಕೊಲೆಯಾಗುತ್ತಾರೆ. ಈ ಕೊಲೆಯ ರಹಸ್ಯ ಭೇದಿಸಲು ಸಿದ್ಧಾರ್ಥ್‌ ಕೊಡಗಿಗೆ ಬರುತ್ತಾನೆ. ಆಗ ನಾಣಯ್ಯಗೆ ಸೇರಿದ ರತ್ನಮಂಜರಿ ಎಸ್ಟೇಟ್‌ನಲ್ಲಿ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎನ್ನುವುದೇ ಚಿತ್ರದ ಹೂರಣ.

ರಾಜ್‌ ಚರಣ್‌ ಮತ್ತು ಅಖಿಲಾ ಪ್ರಕಾಶ್‌ ಗಮನ ಸೆಳೆಯುತ್ತಾರೆ. ಹರ್ಷವರ್ಧನ ರಾಜ್ ಸಂಗೀತದಲ್ಲಿ ಮಾಧುರ್ಯವಿದೆಯಾದರೂ ಹೊಸತನವಿಲ್ಲ. ಪ್ರೀತಮ್‌ ತಗ್ಗಿನಮನೆ ಕ್ಯಾಮೆರಾದಲ್ಲಿ ಕೊಡಗಿನ ಪರಿಸರ ಸೊಗಸಾಗಿ ಸೆರೆ ಸಿಕ್ಕಿದೆ.

ಚಿತ್ರ: ರತ್ನಮಂಜರಿ

ನಿರ್ಮಾಪಕರು: ಎಸ್. ಸಂದೀಪ್‌ ಕುಮಾರ್, ಡಾ.ನವೀನ್ ಕೃಷ್ಣ, ನಟರಾಜ ಹಳೇಬೀಡು

ನಿರ್ದೇಶನ: ಪ್ರಸಿದ್ಧ್‌

ತಾರಾಗಣ: ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ, ಶ್ರದ್ಧಾ ಸಾಲಿಯಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.