ನಾಯಕನಾಗಿ, ಖಳನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ನಟ ಶ್ರೀನಗರ ಕಿಟ್ಟಿ ‘ವೇಷಗಳು’ ಸಿನಿಮಾ ಮೂಲಕ ಜೋಗತಿಯಾಗಿ ತೆರೆ ಮೇಲೆ ಬರಲಿದ್ದಾರೆ. ರವಿ ಬೆಳಗೆರೆ ಅವರ ‘ವೇಷಗಳು’ ಎಂಬ ಸಣ್ಣ ಕಥೆಯು ಸಿನಿಮಾ ರೂಪ ಪಡೆದಿದ್ದು, ಈ ಚಿತ್ರದಲ್ಲಿ ನಟ ಶರತ್ ಲೋಹಿತಾಶ್ವ ಅವರೂ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ.
ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಸಿಂಹಣ್ಣ’ ಎನ್ನುವ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ಶರತ್ ಲೋಹಿತಾಶ್ವ ಅವರ ಪೋಸ್ಟರ್ ಮತ್ತು ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಮೂರು ವಿಭಿನ್ನ ಲುಕ್‌ಗಳಲ್ಲಿ ಶರತ್ ಅವರು ಕಾಣಿಸಿಕೊಂಡಿದ್ದು, ಪಾತ್ರ ಕುತೂಹಲ ಮೂಡಿಸಿದೆ.
ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಷಗಳು’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ ಕಥೆಯಿದ್ದು, ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಇರಲಿದ್ದಾರೆ. ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ, ರಾಜ್ ಗುರು ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.