ADVERTISEMENT

ನಟ ದುನಿಯಾ ವಿಜಯ್‌ ಮಗಳು ರಿತನ್ಯಾ–ರಿಷಿ ಜೋಡಿಯ ‘ಜವರ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 23:05 IST
Last Updated 8 ಡಿಸೆಂಬರ್ 2025, 23:05 IST
<div class="paragraphs"><p>ಚಿತ್ರದ ಮುಹೂರ್ತ</p></div>

ಚಿತ್ರದ ಮುಹೂರ್ತ

   

ನಟ ದುನಿಯಾ ವಿಜಯ್‌ ಮಗಳು ರಿತನ್ಯಾ ವಿಜಯ್‌ ‘ಲ್ಯಾಂಡ್‌ಲಾರ್ಡ್‌’ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ರಿತನ್ಯಾ ಇದೀಗ ಎರಡನೇ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಜೊತೆಗೆ ‘ಜವರ’ ಎನ್ನುವ ಸಿನಿಮಾದಲ್ಲಿ ರಿತನ್ಯಾ ನಟಿಸಲಿದ್ದಾರೆ. 

ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. ನಟ ಕೋಮಲ್‌ ನಟನೆಯ ‘ಯಲಾಕುನ್ನಿ’ ಸಿನಿಮಾ ನಿರ್ದೇಶಿಸಿದ್ದ ಪ್ರದೀಪ್ ದಳವಾಯಿ ‘ಜವರ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಚಿದಾವೃಷಭ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ವಿಶೇಷ ಪಾತ್ರಗಳಲ್ಲಿ ನಟ ರಂಗಾಯಣ ರಘು ಮತ್ತು ನಟಿ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ. 

ADVERTISEMENT

ರಂಗಾಯಣ ರಘು ಈ ಸಿನಿಮಾದಲ್ಲಿ ‘ಗೌರಿ’ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಶ್ರುತಿ ‘ರಾಯಲ್ ಮೀನಾಕ್ಷಿ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿತನ್ಯಾ ‘ಜವರ’ ಸಿನಿಮಾ ಮೂಲಕ ಅಧಿಕೃತವಾಗಿ ನಾಯಕಿಯಾಗಿ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.

‘ಲ್ಯಾಂಡ್‌ಲಾರ್ಡ್’ನಲ್ಲಿ ಮಗಳ ಪಾತ್ರಕ್ಕೆ ರಿತನ್ಯಾ ಬಣ್ಣಹಚ್ಚಿದ್ದಾರೆ. ಸಿನಿಮಾದಲ್ಲಿ ‘ಭೂಮಿ’ ಎನ್ನುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ನಾನು ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರವನ್ನು ನಿರ್ವಹಿಸಲಿದ್ದೇನೆ. ಹೆಸರಾಂತ ಕಲಾವಿದರ ಜೊತೆ ತೆರೆಹಂಚಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ’ ಎನ್ನುತ್ತಾರೆ ರಿತನ್ಯಾ. 

ರಿಷಿ ‘ರುದ್ರ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಿರ್ದೇಶಕರು ಕಥೆ ಹೇಳುವಾಗಲೇ ಚಿತ್ರಕಥೆಯನ್ನು ಸಿದ್ಧಮಾಡಿಕೊಂಡಿದ್ದರು. ಇದು ಸಿನಿಮಾ ಮೇಲಿನ ಅವರ ಬದ್ಧತೆ ತೋರಿಸಿತು. ನಿರ್ದೇಶಕರು ತುಂಬಾ ಯೋಚಿಸಿ ಮಾಡಿರುವ ಕಥೆ ಇದು’ ಎಂದರು ರಿಷಿ. 

‘ಸಿನಿಮಾದ ಕಥೆಗೆ ಶ್ರುತಿ ಮತ್ತು ರಂಗಾಯಣ ರಘು ಅವರು ತುಂಬಾ ಅವಶ್ಯಕತೆ ಇತ್ತು. ಈ ಪಾತ್ರಗಳು ಬಹಳ ಚೆನ್ನಾಗಿದೆ. ರಿತನ್ಯಾ ಅವರು ತುಂಬಾ ಚೆನ್ನಾಗಿ ನಟಿಸುತ್ತಾರೆ. ಅದನ್ನು ನೋಡಿಯೇ ದುನಿಯಾ ವಿಜಯ್ ಅವರಿಗೆ ಕಥೆ ಹೇಳಿದ್ದೆ. ಅವರಿಗೂ ಇಷ್ಟ ಆಗಿ ಮಗಳಿಗೆ ಹೇಳಿದರು. ಬಳಿಕ ರಿತನ್ಯಾ ಒಪ್ಪಿಕೊಂಡರು’ ಎಂದು ಪ್ರದೀಪ್‌ ಹೇಳಿದರು. 

ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.