ADVERTISEMENT

ಮಾಲಿವುಡ್‌ಗೆ ರೋಮ್‌ ಪ್ರಶಸ್ತಿ?

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:15 IST
Last Updated 24 ಮಾರ್ಚ್ 2019, 20:15 IST
ರೋಮ್‌ ಪ್ರಶಸ್ತಿ ಪಟ್ಟಿಯಲ್ಲಿರುವ ಮಲಯಾಳಂ ಚಿತ್ರ
ರೋಮ್‌ ಪ್ರಶಸ್ತಿ ಪಟ್ಟಿಯಲ್ಲಿರುವ ಮಲಯಾಳಂ ಚಿತ್ರ   

ಮಲಯಾಳಂನ ‘ಐಕ್ಕರಕೊನ್ನತ್ತೆ ಭಿಷಗ್ವರನ್ಮಾರ್‌’ ಸಿನಿಮಾ ‘ರೋಮ್‌ ಇಂಡಿಪೆಂಡೆಂಟ್‌ ಪ್ರಿಸ್ಮಾ ಅವಾರ್ಡ್‌’ಗೆ ನಾಮನಿರ್ದೇಶನಗೊಂಡಿದೆ. ಭಾರತದಿಂದ ಈ ಪ್ರಶಸ್ತಿಯ ಮೆಟ್ಟಿಲೇರಿದ ಏಕೈಕ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.

ಅಪರೂಪದ ಚಿತ್ರಕತೆಯನ್ನು ಒಳಗೊಂಡಿರುವುದು ಈ ಚಿತ್ರದ ವಿಶೇಷ. ಅಲೋಪತಿ ವೈದ್ಯರಾಗಿರುವ ತಂದೆ, ತನ್ನ ಇಬ್ಬರೂ ಮಕ್ಕಳು ಅಲೋಪತಿ ವೈದ್ಯರೇ ಆಗಬೇಕು ಎಂದು ಪಟ್ಟುಹಿಡಿಯುವುದು, ಮಕ್ಕಳು ಪರಂಪರಾಗತ ಆಯುರ್ವೇದವನ್ನು ಮತ್ತು ಹೋಮಿಯೋಪತಿಯನ್ನು ಆಯ್ದುಕೊಳ್ಳುವುದು ಚಿತ್ರಕತೆಯ ಒಂದೆಳೆ. ಈ ಕತೆ ನಡೆಯುವುದು ಕೇರಳದ ಐತ್ತರಕೊನ್ನ ಎಂಬ ಊರಿನಲ್ಲಿ. ಈ ಎರಡೂ ಚಿಕಿತ್ಸಾ ಕ್ರಮಗಳುಐಕ್ಕರಕೊನ್ನ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನೂ ಚಿತ್ರದಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ.

ದುಬೈನಲ್ಲಿ ನೆಲೆಸಿರುವ ಇಂಜಿನಿಯರ್‌ ಸೋಹನ್‌ ರಾಯ್‌ ಎಂಬುವವರು ಕಾರ್ಪೊರೇಟ್‌–ಸಮುದಾಯ ಹೊಣೆಗಾರಿಕೆ (ಸಿಎಸ್‌ಆರ್‌) ನೆಲೆಯಲ್ಲಿ ನಿರ್ಮಿಸಿರುವ ಚಿತ್ರ‘ಐಕ್ಕರಕೊನ್ನತ್ತೆ ಭಿಷಗ್ವರನ್ಮಾರ್‌’. ಚಿತ್ರದ ಗಳಿಕೆಯ ಶೇ 75ರಷ್ಟು ಮೊತ್ತವನ್ನು ಕೇರಳದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲೂ, ಮಿಕ್ಕ ಮೊತ್ತವನ್ನು ಚಿತ್ರರಂಗದ ಸಂತ್ರಸ್ತ ಕಾರ್ಮಿಕರಿಗೂ ವಿತರಿಸಲು ಸೋಹನ್‌ ತೀರ್ಮಾನಿಸಿದ್ದಾರೆ.

ADVERTISEMENT

ಬಿಜು ಮಜಿದ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಒಟ್ಟು 175 ಮಂದಿ ಹೊಸಬರು ನಟಿಸಿರುವುದು ವಿಶೇಷ. ಕತೆ, ಚಿತ್ರಕತೆ, ಸಂಭಾಷಣೆ ಶಿಬು ರಾಜ್‌ ಕೆ. ಅವರದು.ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಏಪ್ರಿಲ್‌ ನಾಲ್ಕರಂದು ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.