ADVERTISEMENT

ಸಡಕ್‌ – 2 ಚಿತ್ರದ ಶೂಟಿಂಗ್‌ ಜುಲೈ ಅಂತ್ಯಕ್ಕೆ ಆರಂಭ

ಒಟಿಟಿಯಲ್ಲಿ ಬಿಡುಗಡೆ ಸಾಧ್ಯತೆ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 6:31 IST
Last Updated 21 ಜೂನ್ 2020, 6:31 IST
ಪೂಜಾ ಭಟ್‌, ಆದಿತ್ಯ ರಾಯ್‌ ಕಪೂರ್‌, ಆಲಿಯಾ ಭಟ್‌, ಸಂಜಯ್‌ ದತ್ತ ಹಾಗೂ ಮಹೇಶ್ ಭಟ್‌
ಪೂಜಾ ಭಟ್‌, ಆದಿತ್ಯ ರಾಯ್‌ ಕಪೂರ್‌, ಆಲಿಯಾ ಭಟ್‌, ಸಂಜಯ್‌ ದತ್ತ ಹಾಗೂ ಮಹೇಶ್ ಭಟ್‌   

ಈ ವರ್ಷದ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಸಡಕ್‌ – 2’ ಸಿನಿಮಾದ ಶೂಟಿಂಗ್ ಜುಲೈ ಅಂತ್ಯಕ್ಕೆ ಆರಂಭವಾಗಲಿದೆ ಎಂಬ ವಿಷಯವನ್ನು ಹೊರ ಹಾಕಿದ್ದಾರೆ ನಿರ್ಮಾಪಕ ಮುಕೇಶ್ ಭಟ್‌. ಈ ಚಿತ್ರಕ್ಕೆ ಮಹೇಶ್ ಭಟ್ ನಿರ್ದೇಶನವಿದ್ದು ಮುಂಬೈನಲ್ಲಿ ಶೂಟಿಂಗ್ ನಡೆಯಲಿದೆ. ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಿಸಿದಾಗ ಕೇವಲ ಹಾಡಿನ ಚಿತ್ರೀಕರಣ ಮಾತ್ರ ಮುಗಿದಿತ್ತು. ಸಿನಿಮಾದ ಉಳಿದ ಭಾಗದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಮೂಲಗಳ ‌ಪ್ರಕಾರ ಈ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಈ ಬಗ್ಗೆ ಸದ್ಯದಲ್ಲೇ ಸಿನಿಮಾ ನಿರ್ಮಾಪಕರು ನಿರ್ಧಾರ ಕೈಗೊಳ್ಳಲಿದ್ದಾರಂತೆ.

ಸಿನಿಮಾ ಶೂಟಿಂಗ್‌ ಆರಂಭದ ಬಗ್ಗೆ ಮಾತನಾಡಿರುವ ಮುಕೇಶ್‌ ಭಟ್‌ ಸಿನಿಮಾ ‘ನಾಯಕ–ನಾಯಕಿ ಹಾಗೂ ಚಿತ್ರತಂಡ ಜುಲೈ ಅಂತ್ಯದ ವೇಳೆಗೆ ಸಿನಿಮಾ ಸೆಟ್‌ಗೆ ಸೇರಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ನಾಲ್ಕು ಪ್ರಮುಖ ನಟರನ್ನು ಒಳಗೊಂಡ ಹಾಡೊಂದರ ಚಿತ್ರೀಕರಣವನ್ನು ಊಟಿಯಲ್ಲಿ ಶೂಟಿಂಗ್‌ ಮಾಡಲು ನಿರ್ದರಿಸಲಾಗಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದ ಈ ಹಾಡನ್ನು ಮುಂಬೈನ ಫಿಲ್ಮಂ ಸಿಟಿಯಲ್ಲಿ ಶೂಟ್‌ ಮಾಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ.

‌ಒಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಕುರಿತು ಮಾತನಾಡಿರುವ ಇವರು ‘ಸಿನಿಮಾ ಶೂಟಿಂಗ್ ಪೂರ್ಣಗೊಳ್ಳುವ ಮೊದಲೇ ಒಟಿಟಿಯಲ್ಲಿ ಬಿಡುಗಡೆ ಮಾಡುವುದೋ ಅಥವಾ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದೋ ಎಂಬುದರ ಕುರಿತು ಹೇಗೆ ನಿರ್ಧಾರ ಮಾಡಲು ಸಾಧ್ಯ?. ಶೂಟಿಂಗ್‌ ಮುಗಿದ ತಕ್ಷಣ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸುತ್ತೇವೆ. ಸಿನಿಮಾ ಶೂಟಿಂಗ್‌ಗೆ ಎದುರಾಗುವ ಪ್ರತಿ ಅಡಚಣೆಯನ್ನು ದಾಟಿ ಮುಂದೆ ಹೋಗಬೇಕು. ಫಿಲ್ಮ್ ಸಿಟಿಯಲ್ಲಿ ಶೂಟ್‌ ಮಾಡಲು ನಿರ್ಧಾರ ಮಾಡಿದ್ದೇವೆ. ನಿಯಮಗಳ ಪ್ರಕಾರ ಶೂಟಿಂಗ್ ನಡೆಸುತ್ತೇವೆ. ಹಾಡಿನ ಶೂಟಿಂಗ್‌ಗಾಗಿ ಒಂದು ಸೆಟ್ ಕೂಡ ನಿರ್ಮಾಣ ಮಾಡುತ್ತೇವೆ’ ಎಂದಿದ್ದಾರೆ.

ADVERTISEMENT

ನಿರ್ದೇಶಕ ಮಹೇಶ್ ಭಟ್ ‘ನಾವು ಸಡಕ್‌ ಸಿನಿಮಾ ಮಾಡುವಾಗ ಸಂಜಯ್‌ ದತ್ತ್‌ಗೆ 32 ವರ್ಷ. ಈಗ ಅವರಿಗೆ 54 ವರ್ಷ. ಅಂದಿನ ರವಿ(ಸಡಕ್‌ನಲ್ಲಿ ಸಂಜಯ್ ಪಾತ್ರದ ಹೆಸರು ರವಿ) ಮತ್ತೆ ಮರಳಿದ್ದಾನೆ. ಅವನ ಕಣ್ಣಿನ ತೇಜಸ್ಸಿನ ಮುಂದೆ 21ನೇ ಶತಮಾನವೇ ಕುಸಿಯುವಂತಿದೆ. 90ರ ದಶಕದಲ್ಲಿ ಬಿಡುಗಡೆಯಾದ ಸಡಕ್‌ನ ಭಾವನಾತ್ಮಕ ಬಂಧ ಈ ಸಿನಿಮಾಕ್ಕಿದೆ’ ಎಂದಿದ್ದರು.

ಸಡಕ್‌ 2 ಸಿನಿಮಾದಲ್ಲಿ ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್‌ ಹಾಗೂ ಸಂಜಯ್ ದತ್ತ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.