ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಾಂದ್ರಾ ನ್ಯಾಯಾಲಯಕ್ಕೆ ಹಲವು ಸಾಕ್ಷ್ಯಗಳನ್ನು ಒಳಗೊಂಡ 1,000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಈ ಆರೋಪಪಟ್ಟಿಯಲ್ಲಿ ಬಂಧಿತ ಆರೋಪಿ ಶರೀಫುಲ್ ಇಸ್ಲಾಂ ವಿರುದ್ಧ ಪೊಲೀಸರು ಕಲೆ ಹಾಕಿರುವ ಹಲವು ಪುರಾವೆಗಳಿವೆ.ಅಪರಾಧ ಸ್ಥಳದಲ್ಲಿ, ಸೈಫ್ ಅಲಿ ಖಾನ್ ಅವರ ದೇಹದಲ್ಲಿ ಮತ್ತು ಆರೋಪಿ ಬಳಿ ದೊರೆತ ಚಾಕುವಿನ ಮೂರು ತುಂಡುಗಳು ಒಂದೇ ಚಾಕುವಿನ ತುಂಡುಗಳಾಗಿವೆ ಎಂದು ದೃಢೀಕರಿಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಹ ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.
ತನಿಖೆಯ ಸಮಯದಲ್ಲಿ ಪೊಲೀಸರು ಕಲೆ ಹಾಕಿರುವ ಆರೋಪಿಯ ಎಡಗೈ ಬೆರಳಚ್ಚು ವರದಿಯನ್ನು ಸಹ ಉಲ್ಲೇಖಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಜನವರಿ 16ರಂದು ದರೋಡೆ ಮಾಡಲು ಮುಂಬೈನ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಆರೋಪಿ, ತಡೆಯಲು ಯತ್ನಿಸಿದಾಗ ಅವರ ಮೇಲೇ ಚಾಕುವಿನಿಂದ ಹಲ್ಲೆ ನಡೆಸಿದ್ದ. ದಾಳಿಯಿಂದ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆ ಮತ್ತು ದೇಹದ ಇತರ ಭಾಗಗಳಿಗೆ ಹಾನಿಯಾಗಿತ್ತು.
ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಐದು ದಿನಗಳ ಬಳಿಕ ಚೇತರಿಸಿಕೊಂಡಿದ್ದರು.
ಆರೋಪಿ ಶರೀಫುಲ್ ಇಸ್ಲಾಂ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿ ಕೋಲ್ಕತ್ತದ ಹಲವು ಸ್ಥಳಗಳಲ್ಲಿ ತಂಗಿದ್ದನು. ಬಳಿಕ, ಮುಂಬೈಗೆ ಬಂದಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.