ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆ ಎದುರು ಜಮಾಯಿಸಿರುವ ಮಾಧ್ಯಮ ಪ್ರತಿನಿಧಿಗಳು
ಪಿಟಿಐ ಚಿತ್ರ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ನಟ, ನಟಿಯರು ಹಾಗೂ ನೇತಾರರು, ಮುಂಬೈನಲ್ಲಿ ನಡೆಯುತ್ತಿರುವ ಈ ಕಾನೂನು ಬಾಹಿರ ಚಟುವಟಿಕೆಗಳ ಕುರಿತ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ನಟ ಚಿರಂಜೀವಿ ಮುಂತಾದವರು ಸೈಫ್ ಮೇಲಿನ ದಾಳಿಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಸೈಫ್ ಅವರ ಶೀಘ್ರ ಗುಣಮುಖಕ್ಕೆ ಹಾರೈಸಿದ್ದಾರೆ.
54 ವರ್ಷದ ನಟ ಸೈಫ್‌ಗೆ ಆರು ಕಡೆ ಇರಿಯಲಾಗಿದೆ ಎಂದೆನ್ನಲಾಗಿದೆ. ಇದರಿಂದಾಗಿ ಅವರ ಕುತ್ತಿಗೆಯಲ್ಲಿ ಆಳವಾದ ಗಾಯವಾಗಿದೆ. ಬಾಂದ್ರಾದಲ್ಲಿರುವ ಅವರ ಮನೆಗೆ ಬುಧವಾರ ನಡುರಾತ್ರಿ 2.30ರ ಸುಮಾರಿಗೆ ನುಗ್ಗಿದ ಆಗಂತುಕನೊಬ್ಬ ಸೈಫ್‌ಗೆ ಚಾಕುವಿನಿಂದ ಇರಿದಿದ್ದಾನೆ. ಲೀಲಾವತಿ ಆಸ್ಪತ್ರೆಯ ವೈದ್ಯರು ಎರಡು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸೈಫ್ ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
‘ಹೆಸರಾಂತ ನಟನ ಮೇಲೆ ದಾಳಿ ನಡೆದಿರುವುದು ಕಳವಳಕಾರಿ ಸಂಗತಿ. ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕಾನೂನು ತನ್ನ ಕೆಲಸವನ್ನು ಕೈಗೊಂಡು, ಈ ಕೃತ್ಯಕ್ಕೆ ಕಾರಣರಾದವರನ್ನು ಬೇಗನೆ ಬಂಧಿಸುತ್ತದೆ ಎಂಬ ನಂಬಿಕೆ ಇದೆ. ಈ ಸಂಕಷ್ಟದ ಸಮಯದಲ್ಲಿ ಸೈಫ್ ಅವರ ತಾಯಿ ಶರ್ಮಿಳಾ, ಪತ್ನಿ ಕರೀನಾ ಕಪೂರ್ ಹಾಗೂ ಅವರ ಇಡೀ ಕುಟುಂಬದೊಂದಿಗೆ ನನ್ನ ಪ್ರಾರ್ಥನೆ ಇದೆ’ ಎಂದು ಮಮತಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಶಿವಸೇನಾ (ಯುಬಿಟಿ) ನಾಯಕಿ ಹಾಗೂ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಘಟನೆ ಕುರಿತು ಪ್ರತಿಕ್ರಿಯಿಸಿ, ‘ಮುಂಬೈನಲ್ಲಿ ಮತ್ತೊಬ್ಬ ಹೈಪ್ರೊಫೈಲ್ ವ್ಯಕ್ತಿಗಳ ಮೇಲಿನ ದಾಳಿ ಇದು. ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ ನಡೆಯುತ್ತದೆ. ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೀಗ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ. ಮಹಾರಾಷ್ಟ್ರದ ಗೃಹ ಸಚಿವ ಹಾಗೂ ಮುಂಬೈ ಪೊಲೀಸ್ ಅವರ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಖ್ಯಾತ ನಾಮರ ಮೇಲೆ ದಾಳಿ ನಡೆಸುವ ಮೂಲಕ ಮುಂಬೈ ನಗರವನ್ನು ನಡುಗಿಸುವ ಕೆಲಸ ನಡೆಯುತ್ತಿರುವುದು ಆಘಾತಕಾರಿ’ ಎಂದಿದ್ದಾರೆ.
‘ಬಾಲಿವುಡ್‌ನ ನಟ, ನಟಿಯರು ಹೆಚ್ಚಾಗಿ ಬಾಂದ್ರಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಸಮರ್ಪಕ ಭದ್ರತೆ ಇಲ್ಲದ ಮೇಲೆ, ಮುಂಬೈನಲ್ಲಿ ನೆಲೆಸಿರುವ ಸಾಮಾನ್ಯರ ಪರಿಸ್ಥಿತಿ ಏನು?’ ಎಂದು ಪ್ರಶ್ನಿಸಿದ್ದಾರೆ.
ನಟ ಚಿರಂಜೀವಿ, ನಿರ್ದೇಶಕ ಇಮ್ತಿಯಾಜ್ ಅಲಿ, ನಟಿ ಪರಿಣಿತಿ ಚೋಪ್ರಾ, ಸೋನು ಸೂದ್, ಬಿಜೆಪಿ ಸಂಸದ ರವಿ ಕಿಶನ್, ನಟ ಜೂನಿಯರ್ ಎನ್‌ಟಿಆರ್, ಕುನಾಲ್ ಕೊಹ್ಲಿ, ನೀಲ್ ನಿತಿನ್ ಮುಕೇಶ್ ಸೇರಿದಂತೆ ಹಲವರು ಸೈಫ್ ಅವರ ಮೇಲಿನ ಹಲ್ಲೆಗೆ ಆಘಾತ ವ್ಯಕ್ತಪಡಿಸಿ, ಅವರ ಶೀಘ್ರ ಗುಣಮುಖಕ್ಕೆ ಹಾರೈಸಿದ್ದಾರೆ.
ಬಾಂದ್ರಾ ಪ್ರದೇಶದ ಸತ್‌ಗುರು ಶರಣ್ ಕಟ್ಟಡದ 12ನೇ ಮಹಡಿಯಲ್ಲಿ ಸೈಫ್ ಅವರ ಮನೆ ಇದೆ. ಘಟನೆಯು ಇದೇ ಸ್ಥಳದಲ್ಲಿ ನಡೆದಿದೆ. ಮನೆಯಲ್ಲಿ ದರೋಡೆಗೆ ಯತ್ನ ನಡೆದಿತ್ತು ಎಂದು ಸೈಫ್ ಕಡೆಯವರು ಹೇಳಿದ್ದಾರೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಬೇಕಿದೆ.
ಪ್ರಕರಣ ಕುರಿತು ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಟ ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೂ 2 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ಧಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ #saif #Saifali #SaifAliKhanNews #SAIFALIKHANATTACK #SaifAliKhanInjured ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಇದನ್ನು ಬಳಸಿ ಹಲವರು ನಾನಾಬಗೆ ಪ್ರಶ್ನೆಗಳನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಕೇಳಿದ್ದಾರೆ. ಇನ್ನೂ ಕೆಲವರು ಮೀಮ್‌ಗಳ ಮೂಲಕ ವಿಡಂಬನಾತ್ಮಕವಾಗಿ ಪ್ರಶ್ನೆಗಳನ್ನು ತೂರಿಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.