ADVERTISEMENT

Salaar-1 Trailer: ಪ್ರಭಾಸ್ ನೆರಳಲ್ಲಿ ದೃಶ್ಯ ವೈಭವಕ್ಕೆ ಪ್ರಶಾಂತ್ ನೀಲ್ ಸಜ್ಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2023, 15:31 IST
Last Updated 1 ಡಿಸೆಂಬರ್ 2023, 15:31 IST
Venugopala K.
   Venugopala K.

ಬೆಂಗಳೂರು: ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೆಶನದ ಸಲಾರ್ ಭಾಗ–1ರ ಟ್ರೈಲರ್ ಬಿಡುಗಡೆಗೊಂಡಿದೆ.

ಇಬ್ಬರು ಬಾಲ್ಯದ ಗೆಳೆಯರ(ಪ್ರಭಾಸ್ ಮತ್ತು ಪೃಥ್ವಿರಾಜ್) ಕಥೆಯೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ತನ್ನ ಸ್ನೇಹಿತನಿಗಾಗಿ ಏನು ಬೇಕಾದರೂ ಮಾಡುವೆ ಎಂಬ ಖಡಕ್ ಡೈಲಾಗ್ ಬಂದು ಹೋಗುತ್ತದೆ. ಬಳಿಕ, ಘಸ್ನಿ ಮೊಹಮ್ಮದ್, ಚಂಗೀಸ್‌ ಖಾನ್‌ಗಿಂತಲೂ ಕ್ರೂರವಾದ ಡಕಾಯಿತರಿದ್ದ ಖಾನ್ಸಾರ್ ಕಾಡಿನ ಕೋಟೆ ಬಗ್ಗೆ ವಿವರಣೆ ಬರುತ್ತದೆ. ಅಲ್ಲಿ ಸಹ ಕುರ್ಚಿ ಬಗ್ಗೆ ಕುತಂತ್ರ ನಡೆಯುತ್ತಿತ್ತು. ಖಾನ್ಸಾರ್‌ ಆಳುತ್ತಿರುವ ವರ್ಧನಿ (ಜಗಪತಿ ಬಾಬು) ಮಗ ವರದ ರಾಜ ಮನ್ನಾರ್ (ಪೃಥ್ವಿರಾಜ್) ಅನ್ನು ನಗರದ ಮುಖ್ಯಸ್ಥನನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಾಗ ಒಂದು ಶಕ್ತಿಯು ಅವನನ್ನು ವಿರೋಧಿಸುತ್ತದೆ. ಆ ಸಂದರ್ಭ ಸ್ನೇಹಿತ ದೇವ(ಪ್ರಭಾಸ್) ಪ್ರವೇಶವಾಗುತ್ತದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ದೃಶ್ಯಗಳು ಅತ್ಯಂತ ಗಮನ ಸೆಳೆಯುತ್ತವೆ. ಸೌಂಡ್ ಎಫೆಕ್ಟ್, ಕ್ಯಾರೆಕ್ಟರ್‌ಗಳು, ಡೈಲಾಗ್ ಡೆಲಿವರಿ ಕೆಜಿಎಫ್ ಸಿನಿಮಾವನ್ನೇ ನೆನಪಿಸುತ್ತವೆ.

ಆದರೆ, ಪ್ರಭಾಸ್ ಅವರ ಸರಳ, ಶಕ್ತಿಯುತವಾದ ಬಾಡಿ ಲಾಂಗ್ವೇಜ್ ಹಾಗೂ ಸರಳವಾದ ಸಂಭಾಷಣೆಗಳು ಗಮನ ಸೆಳೆಯುತ್ತವೆ.

ADVERTISEMENT

ಈ ಪ್ಯಾನ್ ಇಂಡಿಯಾ ಚಿತ್ರವನ್ನು ಕೆಜಿಎಫ್ ನಿರ್ಮಾಣದ ಹೊಂಬಾಳೆ ಫೀಲ್ಮ್ಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರು ನಿರ್ಮಿಸಿದ್ದು, ಹಿಂದೆಂದೂ ನೋಡಿರದ ಗ್ರ್ಯಾಂಡ್ ಸಿನಿಮ್ಯಾಟಿಕ್ ಅನುಭವವನ್ನು ತೆರೆ ಮೇಲೆ ನೀಡಲು ಸಜ್ಜಾಗಿದೆ. ಇದಕ್ಕಾಗಿ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಒಳಗೆ 14 ಬೃಹತ್ ಸೆಟ್‌ಗಳನ್ನು ಹಾಕಲಾಗಿತ್ತು. ಕೆಜಿಎಫ್‌ನಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ಸಲಾರ್‌ನಲ್ಲಿ ಕೆಲಸ ಮಾಡಿದ್ದಾರೆ.

ಡಿಸೆಂಬರ್ 22ರಂದು ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ಅದೇ ಸಮಯದಲ್ಲಿ ಬಿಡುಗಡೆಯಾಗಲಿರುವ ಶಾರುಖ್ ಖಾನ್ ಅಭಿನಯದ, ರಾಜಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಚಿತ್ರಕ್ಕೆ ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಸವಾಲೊಡ್ಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.